ಅಂಕೋಲಾ ಮಳೆಯಬ್ಬರಕ್ಕೆ ಗುಡ್ಡ ಕುಸಿತ ; ಮುಳುಗಿದ ಕೃಷಿ ಭೂಮಿ

ಹೊಸದಿಗಂತ ವರದಿ, ಅಂಕೋಲಾ :
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಅಂಕೋಲಾ ತಾಲೂಕಿನಲ್ಲಿ ದಾಖಲಾಗಿದ್ದು , ಹಲವೆಡೆ ಮನೆಗಳಗೆ ನೀರು ನುಗ್ಗಿ ಜನಜೀವನ ತೊಂದರೆಗೆ ಒಳಗಾಗಿದೆ.
ತಾಲೂಕಿನ ಬೆಳಸೆ ಬಳಿ ಗುಡ್ಡ ಕುಸಿದು ಒಂದು ಮನೆ ಅಪಾಯಕ್ಕೆ ಸಿಲುಕಿದೆ. ವೆಂಕಮ್ಮ ಗಣಪಯ್ಯ ಹಳ್ಳೇರ್ ಎನ್ನುವವರ ಮನೆ ಕುಸಿಯುವ ಸ್ಥಿತಿಗೆ ತಲುಪಿದೆ. ತಹಶೀಲ್ದಾರ್ ಉದಯ ಕುಂಬಾರ್ ಅವರು ಕಂದಾಯ ಮತ್ತು ಪೊಲೀಸ್ ಸಿಬ್ಬಂದಿಗಳ ಜೊತೆ ಧಾವಿಸಿ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹೆದ್ದಾರಿಯಲ್ಲಿ ಬಿದ್ದ ಧರೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಳಲೆಯಲ್ಲಿ ಎಂಟು ಮನೆಗಳಿಗೆ ನೀರು ನುಗ್ಗಿದ್ದು ಜನ ಬವಣೆಗೆ ಒಳಗಾಗಿದ್ದಾರೆ. ಬೆಳಸೆ ಕೃಷಿ ಭೂಮಿ ಸಂಪೂರ್ಣ ನೀರಲ್ಲಿ ಮುಳುಗಿದೆ.
ಐಆರ್.ಬಿ ಎಡವಟ್ಟು :
ವಿಪರೀತ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಲು ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಜನ ದೂರತೊಡಗಿದ್ದಾರೆ. ಹೆದ್ದಾರಿ ನಿರ್ಮಾಣ ವೇಳೆ ಮಳೆಗಾಲದ ನೀರು ಹರಿದು ಹೋಗುವ ಪ್ರಮುಖ ಸಾಂಪ್ರದಾಯಿಕ ದಾರಿಗಳನ್ನು ಮುಚ್ಚಲಾಗಿದ್ದು ಇದರಿಂದಾಗಿ ನೀರು ಸಂಗ್ರಹವಾಗಿ ಜನ ತೊಂದರೆ ಪಡುವಂತಾಗಿದೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತಿದ್ದರೂ ಕಂಪನಿ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಮಾರ್ಗ ಹುಡುಕದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಜನ ಮತ್ತೆ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಮಳೆ ಅಬ್ಬರ ತಗ್ಗದಿದ್ದರೆ ಜನವಸತಿ ಪ್ರದೇಶ ಮತ್ತೆ ಮುಳುಗಿ ಕಳೆದ ಬಾರಿಯ ಕರಾಳತೆ ಕಾಣಿಸುವ ಭೀತಿ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!