ಹೊಸದಿಗಂತ ವರದಿ ಶಿವಮೊಗ್ಗ:
ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂ ಸಮಾಜದ ಕಡೆಯಿಂದ ಯಾವುದೇ ಕಲ್ಲು ತೂರಾಟ ನಡೆದಿಲ್ಲ. ಆದರೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಹಿಂದುಗಳೂ ಕಲ್ಲು ತೂರಾಟ ಮಾಡಿದ್ದಾರೆ ಎಂದು ಬಿಂಬಿಸಿ ಹಿಂದೂ ಸಮಾಜವನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಮುಖಂಡ ಉಲ್ಲಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕೋಟೆ ಬಯಲು ರಂಗಮಂದಿರದಲ್ಲಿ ಬು‘ವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ಎಂದು ಬಿಂಬಿಸಲು ಸರ್ಕಾರ ಹೊರಟಿದೆ. ಇದನ್ನು ಮತ್ತು ಕಲ್ಲು ತೂರಾಟ, ಹಲ್ಲೆ-ಕೊಲೆ ಯತ್ನಗಳನ್ನು ಹಿಂದೂ ಜಾಗರಣ ವೇದಿಕೆ ಖಂಡಿಸುತ್ತದೆ ಎಂದರು.
ಕಲ್ಲು ತೂರಾಟದಂತಹ ಕಾರ್ಯಗಳನ್ನು ಸಾಮಾನ್ಯ ಮುಸ್ಲಿಮರು ಯಾರೂ ಮಾಡುವುದಿಲ್ಲ. ಅದನ್ನು ರ್ಯಾಡಿಕಲ್ ಮುಸ್ಲಿಮರು ಮಾಡುತ್ತಾರೆ. ಭಯ ಹುಟ್ಟಿಸುವುದೇ ಇವರ ಉದ್ದೇಶ. ಇಂತಹ ಘಟನೆಗಳು ನಡೆದಾಗ ಯಾವುದೋ ಸಮಾಜ ಮೆಚ್ಚಿಸಲು, ರಾಜಕೀಯ ಮಾಡಲು ಮುಂದಾದರೆ ಸಮಾಜದ ಸುರಕ್ಷೆಗೆ ದ್ರೋಹ ಬಗೆದಂತೆ ಆಗಲಿದೆ. ಈ ಘಟನೆ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆ ಕೈವಾಡ ಇದ್ದಂತೆ ಇದೆ. ಇಂತಹ ಶಕ್ತಿಗಳನ್ನು ಪೊಲೀಸರು ಬಚಾವ್ ಮಾಡಿದರೆ ಮುಂದೆ ಸಮಾಜಕ್ಕೆ ಕಂಟಕವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.