ಶಿಂಜೋ ಅಬೆ ಸಾವನ್ನು ಸಂಭ್ರಮಿಸುತ್ತಿದ್ದಾರೆ ಚೀನೀಯರು; ಅಬೆ ಬಗ್ಗೆ ಈ ಪರಿ ದ್ವೇಷವೇಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ದುರ್ಮರಣಕ್ಕೆ ಇಡೀ ಜಗತ್ತು ಶೋಕದಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ ಚೀನಾದ ರಾಷ್ಟ್ರೀಯತಾವಾದಿಗಳು ಮಾತ್ರ ಅಬೆ ಸಾವಿನಿಂದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದಾರೆ. ಶಿಂಜೋ ಮೇಲೆ ದಾಳಿ ನಡೆಸಿದ್ದವನನ್ನು ‘ಹೀರೋ’ ಎಂದು ಬಣ್ಣಿಸಿ ಸಂಭ್ರಮಾಚರಣೆಯ ಸಂದೇಶಗಳನ್ನು- ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಜಪಾನಿನ ಅಗಲಿದ ನಾಯಕನಿಗೆ ‘ಸಾವಿನ ಶುಭಾಶಯಗಳನ್ನು’ ಕಳುಹಿಸಿ ವಿಕೃತಿ ಮೆರೆದಿದ್ದಾರೆ.
67 ವರ್ಷದ ಅಬೆ ಅವರು ಶುಕ್ರವಾರ ಬೆಳಗ್ಗೆ ಪಶ್ಚಿಮ ಜಪಾನಿನ ನಾರಾ ನಗರದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಹಂತಕ ಟೆಟ್ಸುಯಾ ಯಮಗಾಮಿಯ ಗುಂಡಿಗೆ ಬಲಿಯಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಚೀನಾದಲ್ಲಿ ಸಂಭ್ರಮ ಮೇರೆ ಮೀರಿತ್ತು.
ಆಸ್ಟ್ರೇಲಿಯಾದಲ್ಲಿ ವಾಸವಿರುವ ಚೀನೀ ರಾಜಕೀಯ ವ್ಯಂಗ್ಯಚಿತ್ರಕಾರ, ಕಲಾವಿದ ಮತ್ತು ಹಕ್ಕುಗಳ ಕಾರ್ಯಕರ್ತ ಬಡಿಯುಕಾವೊ ಅವರು ವಿವಿಧ ಚೀನೀ ಸಾಮಾಜಿಕ ಮಾಧ್ಯಮ ʼವೈಬೊದಲ್ಲಿನʼ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಚೀನೀಯರ ನಿಜಬಣ್ಣ ಬಯಲು ಮಾಡಿದ್ದಾರೆ. ಇದರಲ್ಲಿ ಚೀನಿಯರು ಅಬೆ ಸಾವನ್ನು ಬಯಸುವ ಫೋಸ್ಟ್‌ ಗಳು, ದಾಳಿಕೋರನನ್ನು ‘ಹೀರೋ’ ಎಂದು ಬಣ್ಣಿಸಿರುವ ಬಗೆ ಮತ್ತು ಅಬೆ ಮರಣವನ್ನು ಬಯಸಿ ಶುಭಾಶಯಗಳನ್ನು ಹಂತಿಕೊಂಡಿರುವುದನ್ನು ನೋಡಿದರೆ ಅಬೆ ಚೀನೀಯರ ಪಾಲಿಗೆ ಯಾವ ಪರಿ ದುಸ್ವಪ್ನವಾಗಿ ಕಾಡಿದ್ದರು ಎಂಬ ವಿಚಾರ ಸ್ಪಷ್ಟವಾಗುತ್ತದೆ.

‘ವೈಬೋ  #ಆನ್ ಬೀ ವು ಶೆಂಗ್ ಮಿಂಗ್ ಟಿ ಝೆಂಗ್” (ಅಬೆ ಜೀವಂತವಾಗಿ ಉಳಿಯುವ ಯಾವುದೇ ಲಕ್ಷಣಗಳಿಲ್ಲ) ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಅಬೆ ಸಾವನ್ನು ಸಂಭ್ರಮಿಸಲಾಗಿದೆ.
ಅಬೆ ಸಾವಿನ ಕುರಿತು ‘ನಾನು ಖುಷಿಯಿಂದ ನಗಬಹುದೇ?’ ಒಬ್ಬ ಬಳಕೆದಾರ ಪ್ರಶ್ನಿಸಿದರೆ, ‘ಪಾರ್ಟಿ ಟೈಮ್’ ಎಂದು ಮತ್ತೊಬ್ಬ ಹೇಳಿದ್ದಾನೆ. ʼಗನ್ ತುಂಬಾ ಚೆನ್ನಾಗಿದೆ ಎಂದು ಭಾವಿಸುತ್ತೇವೆ’ ʼನಾನು ತುಂಬಾ ಸಂತೋಷವಾಗಿದ್ದೇನೆ’ ಹೀಗೆ ಚೀನಿಯರು ತಮಗೆ ತೋಚಿದಂತೆ ಪ್ರತಿಕ್ರಿಯೆ ಹಂಚಿಕೊಂಡು ವಿಲಕ್ಷಣ ಸಂತೋಷ ಅನುಭವಿಸಿದ್ದಾರೆ.
ಚೀನೀಯರಿಗೆ ಅಬೆ ಬಗ್ಗೆ ಈ ಪರಿ ದ್ವೇಷವೇಕೆ?
ಅಬೆ ಅಧಿಕಾರವಧಿಯಲ್ಲಿ ಚೀನಾ ವಿಸ್ತರಣಾವಾದಿತ್ವ ನೀತಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರು. ಅಬೆ ಅವರು ಚೀನಾದ ಆಕ್ರಮಣಕಾರಿ ನೀತಿಯನ್ನು ಎದುರಿಸುವ ಉದ್ದೇಶದಿಂದ ಭಾರತ- ಆಸ್ಟ್ರೇಲಿಯಾ- ಅಮೆರಿಕಾವನ್ನೊಳಗೊಂಡ ʼಕ್ವಾಡ್‌ʼ ಒಕ್ಕೂಟವನ್ನು ಹುಟ್ಟುಹಾಕಿದ್ದರು. ಇದು ಚೀನಾದ ಕಣ್ಣು ಕೆಂಪಾಗಿಸಿತ್ತು.
ಪೂರ್ವ ಚೀನಾ ಸಮುದ್ರದಲ್ಲಿನ ಜನವಸತಿಯಿಲ್ಲದ ಜಪಾನೀಸ್-ಆಡಳಿತದ ಡಯಾಯು/ಸೆಂಕಾಕು ದ್ವೀಪಗಳು ಚೀನಾ ತನ್ನ ಭೂಪ್ರದೇಶದ ಭಾಗವೆಂದು ವಾದಿಸುತ್ತಿದೆ. ಅಬೆ ಅದೆಂತಹ ಪ್ರಭಾವಿ ನಾಯಕರಾಗಿದ್ದರೆಂದರೆ, ಚೀನಾದ ಅತಿಕ್ರಮಣ ನೀತಿಯನ್ನು ಜಗತ್ತಿನೆದುರು ತೆರೆದಿಟ್ಟು ಚೀನಾದ ಎಲ್ಲಾ ಪ್ರಯತ್ನಗಳಿಗೆ ಸೆಡ್ಡುಹೊಡೆದಿದ್ದರು. ಡಿಸೆಂಬರ್ 2021 ಅಬೆ ತೈವಾನ್‌ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದು ಚೀನಾವನ್ನು ಕೆರಳಿಸಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಚೀನಾ ತನ್ನ ಶತ್ರು, ಪ್ರತಿಸ್ಪರ್ಧಿಯೆಂದು ಭಾವಿಸುವ ಭಾರತದೊಂದಿಗೆ ಅಬೆ ಅತ್ಯುತ್ತಮ ಸಂಬಂಧ ಹೊಂದಿದ್ದರು. ಭಾರತ- ಜಪಾನ್‌ ಸ್ನೇಹಸಂಬಂಧ, ಸಹಭಾಗಿತ್ವದಲ್ಲಿ ಮತ್ತೊಂದು ಮಜಲನ್ನು ತಲುಪಿವೆ. ಈ ಎಲ್ಲಾ ವಿಚಾರಗಳಿಂದ ಅಬೆ ಚೀನೀಯರ ಪಾಲಿಗೆ ʼವಿಲನ್‌ʼ ಆಗಿದ್ದು ಅವರ ಸಾವನ್ನು ಸಂಭ್ರಮಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!