ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಪಿಎಫ್‌ಐ ನಿಷೇಧ ಐತಿಹಾಸಿಕ ಕ್ರಮ: ಸಚಿವ ಮುರುಗೇಶ್‌ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿ, ಸಾರ್ವಜನಿಕ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಶಂಸಿದ್ದಾರೆ.

ಕೇಂದ್ರ ಸರಕಾರ ಬಲವಾದ ಸಾಕ್ಷ್ಯಾಧಾರ ಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ನಿಷೇಧ ಕ್ರಮ ಕೈಗೊಂಡಿದೆ. ಇದಕ್ಕಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವರಾದ ಅಮಿಶ್ ಷಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಘಟನೆಗೆ ನಿಷೇಧ ಹೇರಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು. ಎಲ್ಲಿಯ ತನಕ ದೇಶದಲ್ಲಿ ಮೋದಿ ಅವರಂತಹ ಬಲಿಷ್ಟ ನಾಯಕ ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯ ತನಕ ಭಯೋತ್ಪಾದನೆ, ಭಯೋತ್ಪಾದಕರು, ಮೂಲಭೂತವಾದಿಗಳು ಸೇರಿದಂತೆ ಸಮಾಜಘಾತುಕ ಶಕ್ತಿಗಳಿಗೆ ದೇಶದಲ್ಲಿ ಉಳಿಗಾಲ ಇರುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದು ನಿರಾಣಿ ಅವರು ಎಚ್ಚರಿಸಿದ್ದಾರೆ.

ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟಿಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ರಾಜಕಾರಣ ಮಾಡಬಾರದು ಎಂದು ಸಚಿವ ನಿರಾಣಿ ಅವರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!