ಹೋಳಿ ವಿಶೇಷ- ಹೀಗಿತ್ತು ಹಾಲಕ್ಕಿ ಸಮಾಜದವರ ವೇಷ ಪ್ರದರ್ಶನ

ಹೊಸದಿಗಂತ ವರದಿ ಅಂಕೋಲಾ :

ಹೋಳಿ ಹಬ್ಬದ ಪ್ರಯುಕ್ತ ಬೆಳಂಬಾರದ ಹಾಲಕ್ಕಿ ಸಮಾಜದವರಿಂದ ಸಂಪ್ರದಾಯಬದ್ಧ ಸುಗ್ಗಿ ಕುಣಿತ ಮತ್ತು ಹಗರಣ ವೇಷಗಳ ಪ್ರದರ್ಶನವು ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ಮುಖ್ಯ ರಸ್ತೆ ಮೂಲಕ ಬಂಡಿ ಬಜಾರ, ಹಳೇಬಜಾರ, ಜೈಹಿಂದ್ ರಸ್ತೆಯ ಮೂಲಕ ಸಾಂಪ್ರದಾಯಿಕ ವೇಷ ಭೂಷಣ, ಆಕರ್ಷಕ ಕುಣಿತದೊಂದಿಗೆ ತಹಶೀಲ್ಧಾರರ ಕಚೇರಿ ಆವರಣಕ್ಕೆ ಆಗಮಿಸಿದ ಸುಗ್ಗಿ ತಂಡ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ನೀಡಲಾಗಿರುವ ಗೌರವ ತಾಮ್ರಪತ್ರ ಪ್ರದರ್ಶಿಸಿ ತಾಲೂಕು ದಂಡಾಧಿಕಾರಿಗಳ ಕಚೇರಿ ಆವರಣದಲ್ಲಿ ಆಕರ್ಷಕ ಸುಗ್ಗಿ ಕುಣಿತದ ಪ್ರದರ್ಶನ ನೀಡಿದರು.

ತಹಶೀಲ್ದಾರ್ ಸತೀಶ ಗೌಡ ಸುಗ್ಗಿ ತಂಡಕ್ಕೆ ವಿಶೇಷ ಗೌರವ ಸಲ್ಲಿಸಿದರು. ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಸುಗ್ಗಿ ಕುಣಿತ ಮತ್ತು ಹಾಲಕ್ಕಿ ಹಗರಣಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಗಮನ ಸೆಳೆದ ಹಗರಣ ವೇಷ ಪ್ರದರ್ಶನ :

ಬೆಳಂಬಾರದ ಹಾಲಕ್ಕಿ ಸಮಾಜದವರು ಪಟ್ಟಣದಲ್ಲಿ ಪ್ರದರ್ಶನ ನೀಡಿದ ಹಗರಣ ಪ್ರಹಸನಗಳು ಹೆಚ್ಚು ಮೆಚ್ಚುಗೆ ಪಡೆದವು. ಶಿರಡಿ ಸಾಯಿಬಾಬಾ, ರಾಮ,ಲಕ್ಷ್ಮಣ, ಸೀತೆ, ಶ್ರೀ ಕೃಷ್ಣನನ್ನು ಹೊತ್ತ ವಸುದೇವ,ಕುಂಭಕರ್ಣ ನಿದ್ದೆ, ಭೂತ ಬಿಡಿಸುವುದು, ಆಫ್ರಿಕಾ ಬುಡಕಟ್ಟು ಜನಾಂಗ, ಬಾಹುಬಲಿ ಕಾಲಕೇಯ ಯುದ್ಧ, ರಾಜಕೀಯ ನಾಯಕರ ಚುನಾವಣಾ ಪ್ರಚಾರ, ಹುಲಿ ಕುಣಿತ, ಆಫ್ರಿಕಾದಿಂದ ವಿಮಾನದಲ್ಲಿ ಭಾರತಕ್ಕೆ ಚೀತಾ ಆಗಮನ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವಾಗತ, ಯಾಣ, ಸ್ವಯಂ ಉದ್ಯೋಗ ಅವಕಾಶಗಳು, ಹಾಲಕ್ಕಿಗಳನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸುವುದು, ಸಮುದ್ರ ಮಂಥನ ಮೊದಲಾದ ರೂಪಕಗಳು ಜನರನ್ನು ರಂಜಿಸಿದವು. ಬಳಿಕ ಹಗರಣ ಕುರಿತು ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

“ಬೆಳಂಬಾರ ಹಾಲಕ್ಕಿ ಸುಗ್ಗಿ ಕುಣಿತ ಮತ್ತು ಹಗರಣಗಳಿಗೆ ಹಲವಾರು ವರ್ಷಗಳ ಇತಿಹಾಸವಿದ್ದು, ಬ್ರಿಟಿಷ್ ಸರ್ಕಾರ ತಾಮ್ರಪತ್ರ ನೀಡಿ ಗೌರವಿಸಿದೆ. ಹಿಂದೆ ಬ್ರಿಟಿಷ್ ಸರ್ಕಾರದ ದೌರ್ಜನ್ಯವನ್ನು ಹಗರಣಗಳ ಮೂಲಕ ಪ್ರದರ್ಶನ ಮಾಡಿ ಗಮನ ಸೆಳೆಯಲಾಗುತ್ತಿತ್ತು” -ಹನುಮಂತ ಗೌಡ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!