Saturday, July 2, 2022

Latest Posts

ಮಲೆತಿರಿಕೆ ಬೆಟ್ಟದ ನಿವಾಸಿಗಳಿಗೆ ಮರೀಚಿಕೆಯಾದ ಮನೆ: ಕೊಡಗು ರಕ್ಷಣಾ ವೇದಿಕೆ ಹೇಳಿದ್ದೇನು?

ಹೊಸದಿಗಂತ ವರದಿ, ಕೊಡಗು

ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲೆತಿರಿಕೆ ಬೆಟ್ಟದಲ್ಲಿ 2019ರಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ‌ ಪರ್ಯಾಯವಾಗಿ ನೂತನ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವಂತೆ ಸರ್ಕಾರ ಆದೇಶ ಮಾಡಿ ಎರಡು ವರ್ಷವಾದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆ, ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕೊರವೇಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಉಸ್ತುವಾರಿ ತಂಬಂಡ ಡ್ಯಾನಿ ನಾಣಯ್ಯ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಅಪ್ಪಂಡೇರಂಡ ಯಶವಂತ್ ಕಾಳಪ್ಪ ಅವರುಗಳು ಜಿಲ್ಲಾಡಳಿತದ ವಿಳಂಬ ಧೋರಣೆಯನ್ನು ಖಂಡಿಸಿದ್ದಾರೆ.
ವೀರಾಜಪೇಟೆ ಪ.ಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಬಾಧಿತವಾದ 66 ಕುಟುಂಬಗಳನ್ನು ಮಳೆಗಾಲದೊಳಗೆ ಸ್ಥಳಾಂತರಿಸುವುದು ಮತ್ತು ಎರಡನೇ ಹಂತದಲ್ಲಿ 165 ಮನೆಗಳು ಸೇರಿದಂತೆ ಒಟ್ಟು 231 ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಆಂಬಟ್ಟಿ ಗ್ರಾಮದಲ್ಲಿ 7.8 ಎಕರೆ ಜಮೀನನ್ನು ಖರೀದಿಸಲು ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಜಾಗ ಖರೀದಿಸುವ ಪ್ರಕ್ರಿಯೆ ನಡೆದಿಲ್ಲ. ಸಂತ್ರಸ್ತರು ಅತಂತ್ರರಾಗಿದ್ದು, ಗೊಂದಲದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ಶೀಘ್ರ ಜಾಗವನ್ನು ಖರೀದಿಸಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ.
ವಿಳಂಬ ಧೋರಣೆ ಹೀಗೆ ಮುಂದುವರೆದರೆ ಸಾರ್ವಜನಿಕರ ಸಹಕಾರದೊಂದಿಗೆ ಪ.ಪಂ.ಎದುರು ಕೊರವೇ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss