Saturday, June 10, 2023

Latest Posts

ಕಾಯ್ದೆ ಉಲ್ಲಂಘನೆಗಾಗಿ ಮೊಕದ್ದಮೆ ದಾಖಲು: ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕೋವಿಡ್ ಸೋಂಕಿನ ನಡುವೆಯೂ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರು, ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೋನಾ ನಿಯಂತ್ರಣ ನಿಯಮ ಉಲ್ಲಂಘಿಸಿದವರ ವಿರುದ್ಧ ರಾಮನಗರ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು. ಆದರೆ ನಮ್ಮ ಆತಂಕ ಇರುವುದು ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ ಎಂದಿದ್ದಾರೆ.

ಕೊರೋನಾ ಸೋಂಕು ಉಲ್ಬಣಗೊಂಡು ಜನತೆ ಸಂಕಷ್ಟಕ್ಕೆ ಒಳಗಾದರೆ, ಕಾಂಗ್ರೆಸ್ ನಾಯಕರು ಹೊಣೆ ಹೊರಬೇಕಾದೀತು ಎಂದು ಎಚ್ಚರಿಸಿದ ಸಚಿವರು, ಕಾಂಗ್ರೆಸ್ ನಡೆಗೆ ನಾಡಿನ ಜನತೆಯೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ನಾಯಕರ ನಡವಳಿಕೆ ಅತ್ಯಂತ ಹೊಣೆಗೇಡಿತನ. ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಜಿಲ್ಲಾಡಳಿತ ನಿಭಾಯಿಸುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರು ನ್ಯಾಯಾಲಯದಲ್ಲಿ ಉತ್ತರಿಸಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿಗರು ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ಆದರೆ ಜನತೆ ಬುದ್ದಿವಂತರು, ಇವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದಾರೆ. ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮುಂದಿನ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಗೃಹ ಸಚಿವರು ಟೀಕಿಸಿದ್ದಾರೆ.

ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ಧವಿದೆ, ಯಾವುದೇ ಸಂಶಯ ಬೇಡ. ವಿವಾದ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಮುಂದಿದೆ ಎಂದಿರುವ ಸಚಿವರು, ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ, ಐದು ವರ್ಷದಲ್ಲಿ ಕೇವಲ ಡಿಪಿಆರ್ ಸಲ್ಲಿಸಿದ್ದು ಬಿಟ್ಟರೆ, ಬೇರೆ ಏನೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ.

ಕೊರೋನಾ ನಿಬಂಧನೆಗಳನ್ನು ಪಾಲಿಸುವುದಿಲ್ಲ, ಬೇಕಾದರೆ ಜೈಲಿಗೆ ಹಾಕಿ ಎಂದು ಸವಾಲು ಎಸೆದಿದ್ದಾರೆ ಇದು ಅವರ ಉದ್ದಟತನ ತೋರಿಸುತ್ತದೆ. ಕಾಂಗ್ರೆಸ್ ನಾಯಕರ ಬಗ್ಗೆ ಜನ ಸಾಮಾನ್ಯರು ಜಿಗುಪ್ಸೆಗೊಳ್ಳುತ್ತಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!