ಹೊಸ ದಿಗಂತ ವರದಿ, ಮಂಗಳೂರು:
ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಗುರುವಾರ ಬಂಧಿಸಿರುವ ಬಜಪೆ ಠಾಣಾ ಪೊಲೀಸರು ಆರೋಪಿಯಿಂದ ಸುಮಾರು ರೂ.೫ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
ಮೀಯಪದವಿನ ಅಬ್ಬಾಸ್ ಯಾನೆ ಟಿ.ಅಬ್ಬಾಸ್, ಯಾನೆ ಮಿಯಾಪದವು ಅಬ್ಬಾಸ್ ಯಾನೆ ನಜೀರ್ ಯಾನೆ ಇಬ್ರಾಹಿಂ ಬಂಧಿತ. ಈತ 2020ರ ಮೇ ತಿಂಗಳಿನಲ್ಲಿ ಅಡ್ಡೂರು ಗ್ರಾಮದ ಪಲ್ಲಂಗಡಿಯ ಅಹಮ್ಮದ್ ಬಾವ ಎಂಬವರ ಮನೆಯ ಮುಂಭಾಗದ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿ ಕಬೋರ್ಡ್ ನಲ್ಲಿದ್ದ ಸುಮಾರು ರೂ.5ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿ ಅಬ್ಬಾಸ್ ಬೆಳ್ತಂಗಡಿ, ಕಡಬ, ರಾಮಕುಂಜ, ಪುತ್ತೂರು, ಉಳ್ಳಾಲ, ಕೇರಳ ರಾಜ್ಯದ ಕುಂಬ್ಳೆ, ಮಂಜೇಶ್ವರ ಮತ್ತು ಇತರ ಕಡೆಗಳಲ್ಲಿ ವಿಳಾಸವನ್ನು ಬದಲಾಯಿಸಿಕೊಂಡು ಕಳೆದ ಒಂದುವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿ ಅಬ್ಬಾಸ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ, ಉಳ್ಳಾಲ, ಬೆಳ್ತಂಗಡಿ, ಕುಂಬ್ಳೆ, ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು, ಗ್ಯಾಸ್ ಸಿಲಿಂಡ್ ಕಳವು, ಬೈಕ್ ಕಳ್ಳತನ ಹಾಗೂ ಅಮೂಲ್ಯವಾದ ಬೀಟೆ ಮರ ಕಳ್ಳತನ ಸಂಬಂಧಿಸಿ ೨೦ ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಆರೋಪಿ ವಿಚಾರಣೆ ವೇಳೆ ಗಂಜಿಮಠದಲ್ಲಿ ಜೆಸಿಂತಾ ಎಂಬವರಿಗೆ ಸೇರಿದ ಡಿಕುನ್ನ ಕಾಂಪ್ಲಕ್ಸ್ ನಲ್ಲಿ ಮೊಬೈಲ್ ಕಳವಿಗೂ ಯತ್ನಿಸಿರುವುದನ್ನು ಬಾಯಿಬಿಟ್ಟಿದ್ದಾನೆ. ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್.ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ, ಪಿಎಸ್ಐಗಳಾದ, ಪೂವಪ್ಪ, ಅರುಣ ಕುಮಾರ್, ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ್, ಕಮಲ, ರಾಮ ಪೂಜಾರಿ ಮೇರೆಮಜಲು, ಸಂತೋಷ ಡಿ.ಕೆ ಸುಳ್ಯ, ರಶೀದ ಶೇಖ್, ಸುಜನ್, ಕಮಲಾಕ್ಷ, ರಾಜೇಶ್, ಹೊನ್ನಪ್ಪ ಗೌಡ, ಸಿದ್ದಲಿಂಗಯ್ಯ ಹಿರೇಮಠ್, ಸಂಜೀವ, ಮುತ್ತಣ್ಣ, ಪ್ರಕಾಶ್, ಮನೋಜ್ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.