ಹೊಸದಿಗಂತ ಆನ್ ಲೈನ್ ಡೆಸ್ಕ್:
ಚಲಿಸಲು ಅಸಾಧ್ಯವಾದ, ವಿಶೇಷ ಅಗತ್ಯವಿರುವ ಮಂದಿಗೆ ಮನೆಯಲ್ಲಿ ಲಸಿಕೆ ಹಾಕಲು ಆರೋಗ್ಯ ಸಚಿವಾಲಯ ಗುರುವಾರ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಎಲ್ಲಿಯೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ತಮ್ಮ ಮನೆಯಿಂದ ಹೊರಗೆ ಬರಲು ಸಾಧ್ಯವಾಗದೇ ಇರುವಷ್ಟು ಚಲನಶೀಲತೆ ಇಲ್ಲದವರು ಅಥವಾ ಯಾರಾದರೂ ಅಂಗವೈಕಲ್ಯ ಅಥವಾ ಕೆಲವು ವಿಶೇಷ ಅಗತ್ಯಗಳನ್ನು ಹೊಂದಿದ್ದರೆ ಅವರನ್ನು ಲಸಿಕೆ ಕೇಂದ್ರಕ್ಕೆ ಕರೆತರಲು ಸಾಧ್ಯವಾಗದಿದ್ದರೆ ನಾವು ಮನೆಯಲ್ಲಿಯೇ ಲಸಿಕೆ ಹಾಕುತ್ತೇವೆ’ ಎಂದು ಡಾ ಪೌಲ್ ಹೇಳಿದರು.
ಭಾರತವು ತನ್ನ ವಯಸ್ಕ ಜನಸಂಖ್ಯೆಯ ಶೇ. 66 ನಷ್ಟು ಜನರಿಗೆ ಲಸಿಕೆಗಳ ಕನಿಷ್ಠ ಒಂದು ಡೋಸ್ ನೀಡಿ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಲಸಿಕೆ ಸುರಕ್ಷಿತವಾಗಿದೆ ಮತ್ತು ಮನೆಗಳಿಗೆ ಹೋಗಿ ಲಸಿಕೆ ಹಾಕುವ ವ್ಯವಸ್ಥೆಯು ಸುರಕ್ಷಿತ, ಪರಿಣಾಮಕಾರಿ ಮತ್ತು ಬೆಂಬಲವಾಗಿರುತ್ತದೆ ಎಂಬ ವಿಶ್ವಾಸ ನಮಗಿದೆ. ಇದು ಮಾರ್ಗಸೂಚಿಯನ್ನು ಅನುಸರಿಸುತ್ತದೆ. ಇದು ಮಹತ್ವದ ಬೆಳವಣಿಗೆ ಎಂದು ಡಾ. ಪೌಲ್ ಹೇಳಿದರು. ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದ್ದು ಸ್ಥಳೀಯ ತಂಡಗಳು ಇಂತಹ ಲಸಿಕಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ.
ಕೇಂದ್ರವು ಈ ಸಂಬಂಧ ಸೆಪ್ಟೆಂಬರ್ 22 ರಂದು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ ಎಂದು ಅವರು ಹೇಳಿದ್ದಾರೆ.