Wednesday, July 6, 2022

Latest Posts

ಚಿತ್ರದುರ್ಗದಲ್ಲಿ ಆಕ್ಸಿಜನ್ ಉತ್ಪಾದನಾ ಘಕಟ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ : ಜಗದೀಶ್ ಶೆಟ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಣ್ಣ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಭದ್ರಾವತಿಗೆ ತೆರಳುವ ಮಾರ್ಗಮಧ್ಯ ನಗರದಲ್ಲಿನ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ಜಿಲ್ಲೆಗೆ ೩ ಸಾವಿರ ಲೀಟರ್ ಆಕ್ಸಿಜನ್ ಪೂರೈಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬೇಕಾಗುತ್ತದೆ ಎನ್ನಲಾಗಿದೆ. ಅಲ್ಲದೇ ಹಿಂದುಳಿದ ಜಿಲ್ಲೆಯಾದ ಕಾರಣ ಇಲ್ಲಿನ ರೋಗಿಗಳಿಗೆ ಆಕ್ಸಿಜನ್ ಸಮರ್ಪಕ ಪೂರೈಕೆಗಾಗಿ ಇಲ್ಲಿಯೇ ಉತ್ಪಾದನಾ ಘಟಕ ಆರಂಭಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯದ ಅನೇಕ ಜಿಲ್ಲೆಗಳಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಹಾಗಾಗಿ ಬಳ್ಳಾರಿಯ ಜಿಂದಾಲ್‌ನಲ್ಲಿ ಉತ್ಪಾದಿಸುವ ಆಕ್ಸಿಜನ್ ಬೇರೆ ರಾಜ್ಯಗಳಿಗೂ ಸರಬರಾಜಾಗುತ್ತಿದೆ. ಇದನ್ನು ಇಲ್ಲಿಯೇ ಬಳಸಿಕೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಕೇಳಲಾಗಿದೆ. ಅಲ್ಲದೇ ಈಗ ರಾಜ್ಯಕ್ಕೆ 810 ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇದನ್ನು 1200 ಅಥವಾ 1400 ಟನ್‌ವರೆಗೆ ಹೆಚ್ಚಿಸುವಂತೆ ಮಾತುಕತೆ ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತಿಳಿಸಲಿದೆ ಎಂದು ಹೇಳಿದರು.
ಭದ್ರಾವತಿಯಲ್ಲಿ ಈ ಹಿಂದೆ ಇದ್ದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಗಿತಗೊಂಡಿದೆ. ಅದನ್ನು ಪನರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತು ಮಾತುಕತೆ ನಡೆಸಲು ಇಂದು ಭದ್ರಾವತಿಗೆ ಪ್ರಯಾಣ ಬೆಳೆಸಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಸಹ ಸ್ವಯಂ ಪ್ರೇರಣೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಅಂದಾಗ ಮಾತ್ರ ಸೋಂಕು ಹರಡುವಿಕೆ ಕಡಿಮೆ ಮಾಡಬಹುದು ಎಂದು ಮನವಿ ಮಾಡಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಸ್ತುತ ಜಿಲ್ಲೆಗೆ ಪೂರೈಕೆಯಾಗುವ ಆಕ್ಸಿಜನ್ ಜೊತೆಗೆ ಹೆಚ್ಚವರಿಯಾಗಿ ನೀಡುವಂತೆ ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆ ಕುರಿತು ಸಚಿವರಿಗೆ ಮನದಟ್ಟು ಮಾಡಿಕೊಡಲಾಗಿದೆ. ಅದಕ್ಕೆ ತಕ್ಕಂತೆ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರೂ ಸಹ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್‌ಡೌನ್ ಜಾರಿ ಮಾಡುವ ಕುರಿತು ತಜ್ಞರ ಸಮಿತಿ ಹಾಗೂ ರಾಜ್ಯ ಸರ್ಕಾರ ನಿರ್ಧಾರ ಮಾಡಲಿವೆ. ಸೋಂಕು ನಿವಾರಣೆಗೆ ಸರ್ಕಾರ ಏನೆಲ್ಲಾ ಪ್ರಯತ್ನ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಸ್ವಇಚ್ಚೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಬೇಕು. ತಪ್ಪಿದಲ್ಲಿ ಅನಾಹುತ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss