ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನಿಟ್ರ್ಯಾಪ್ ಗ್ಯಾಂಗ್‌ನ ಬಲೆಗೆ ಬಿದ್ದು ಉದ್ಯಮಿಯೊಬ್ಬರು 40 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ಮಹಿಳೆ ಸಿನಿಮಾ ಮಾಡೋಣ, ನಾನು ಫೀಲ್ಡ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳಿ ಉದ್ಯಮಿ ಸ್ನೇಹ ಮಾಡಿದ್ದಳು. ಇದಾದ ಕೆಲ ದಿನಗಳ ನಂತರ ನಮ್ಮ ಡೈರೆಕ್ಟರ್‌ಗೆ ಹಣದ ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ನಾಲ್ಕು ಲಕ್ಷ ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವೀಡಿಯೋ ಮಾಡಿಕೊಂಡಿದ್ದಾಳೆ.
ಆ ಬಳಿಕ ಇದೇ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಉದ್ಯಮಿಯಿಂದ ಬ್ರಾಸ್‌ಲೈಟ್, ಚೈನ್ ಅಂತೆಲ್ಲಾ ಸುಮಾರು 40 ಲಕ್ಷ ಹಣ ಪೀಕಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ ಕಾರು ಕೊಡಿಸು ಎಂದು ದುಂಬಾಲು ಬಿದ್ದಿದ್ದಳು.
ಇದಕ್ಕೆ ಒಪ್ಪದಿದ್ದಾಗ ಆರೋಪಿ ಮಹಿಳೆ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿಸಿದ್ದಾಳೆ. ಹಣ ಕೊಡದಿದ್ದರೆ ವೀಡಿಯೋಗಳನ್ನ ಟಿವಿಗೆ ಕೊಡೋದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದರು. ಅಷ್ಟೇ ಅಲ್ಲದೆ ಹಣ ನೀಡದಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ದೂರುದಾರನ ಫೋಟೋ ಹಾಕಿ ಮಾನಹರಣ ಮಾಡಿರುವುದಾಗಿ ಉದ್ಯಮಿ ದೂರು ನೀಡಿದ್ದಾರೆ.
ದೂರುದಾರ ಅಶೋಕನಗರ ಠಾಣೆಯಲ್ಲಿ ಆರೋಪಿತ ಮಹಿಳೆ, ದಿಲೀಪ್, ರವಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಹನಿಟ್ರ್ಯಾಪ್ ಮಹಿಳೆ ಮತ್ತು ಗ್ಯಾಂಗ್‌ನ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.