Sunday, June 26, 2022

Latest Posts

ತೊರೆನೂರುವಿನಲ್ಲಿ ವೈಭವದ ಹೊನ್ನಾರು ಉತ್ಸವ: 100ಕ್ಕೂ ಅಧಿಕ ಜೋಡಿ ಎತ್ತುಗಳಿಂದ ಉಳುಮೆ

ಹೊಸದಿಗಂತ ವರದಿ, ಕುಶಾಲನಗರ:

ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ಹೊನ್ನಾರು (ಚಿನ್ನದ ಸಾಲು) ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಉತ್ಸವ ಆಚರಣೆಗೆ ಗ್ರಾಮದಲ್ಲಿರುವ ರೈತರುಗಳು ತಮ್ಮ ತಮ್ಮ ಜೋಡಿ ಎತ್ತುಗಳನ್ನು ಸಿಂಗರಿಸಿಕೊಂಡು ದೇವಾಲಯದ ಆವರಣಕ್ಕೆ ಬಂದು ಸಮಿತಿಯ ವತಿಯಿಂದ ದೇವಸ್ಥಾನದ ಬೃಹತ್ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ದೇವರ ಭೂಮಿಯಲ್ಲಿ ಸಂಪ್ರದಾಯದಂತೆ ಪಂಚಾಂಗ ನೋಡಿ ಪಂಚಾಂಗದಲ್ಲಿನ ಅಕ್ಷರದನ್ವಯ ಸ್ಥಳೀಯರು ಸಿಂಗಾರಗೊಂಡ ತಮ್ಮ ಜೋಡಿ ಎತ್ತುಗಳಿಂದ ಪೂರ್ವದಿಂದ ಪಶ್ಚಿಮಕ್ಕೆ ಉಳುಮೆ ಮಾಡುವ ಮೂಲಕ  ಹೊನ್ನಾರು ಉತ್ಸವಕ್ಕೆ ಚಾಲನೆ ನೀಡಲಾಯಿತು.

ಉತ್ಸವದಲ್ಲಿ ಗ್ರಾಮದ 100ಕ್ಕೂ ಅಧಿಕ ರೈತರ ಜೋಡಿ ಎತ್ತುಗಳು ಸಿಂಗಾರಗೊಂಡು ಮಂಗಳ ವಾದ್ಯದೊಂದಿಗೆ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ನಂತರ ಜೋಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಅವರವರ ಜಮೀನುಗಳಿಗೆ ತೆರಳಿ  ಹೊನ್ನಾರು (ಚಿನ್ನದ ಸಾಲು) ಉಳುಮೆ ಮಾಡುವುದರ ಮೂಲಕ  ಸಾಂಪ್ರದಾಯಿಕ ಜಮೀನಿನ ಉಳುಮೆಗೆ ಚಾಲನೆ ನೀಡಲಾಯಿತು.

ಈ ಪದ್ಧತಿಯನ್ನು ಕಳೆದ 60 ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಸಂದರ್ಭ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದರೆ, ಮಹಿಳೆಯರು ಗ್ರಾಮದ ಬೀದಿಗಳಲ್ಲಿ  ವಿವಿಧ ರಂಗೋಲಿ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಸದಸ್ಯ ಟಿ. ಸಿ. ಶಿವಕುಮಾರ್ ವಹಿಸಿದ್ದರು. ಹೊನ್ನಾರು ಉತ್ಸವದ ಆಚರಣೆ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಶ್ರೀ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ  ಹೆಚ್.ಬಿ. ಚಂದ್ರಪ್ಪ ಮಾತಾನಾಡಿದರು. ಇದೇ ಸಂದರ್ಭ ಹೊನ್ನಾರು ಉತ್ಸವದಲ್ಲಿ ಭಾಗವಹಿಸಿದ ಎಲ್ಲಾ ಜೋಡಿ  ಎತ್ತುಗಳಿಗೆ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರಿ,ಉಪಾಧ್ಯಕ್ಷ ಟಿ.ಟಿ ಪ್ರಕಾಶ್, ಖಜಾಂಚಿ ಜಗದೀಶ್,  ಗೋವಿಂದ, ದೇವರಾಜು, ಯೋಗೇಶ್, ಮಂಜುನಾಥ, ಚಿನ್ನಪ್ಪ, ತುಂಗರಾಜ, ಪ್ರೇಮ ಕುಮಾರ್, ಸಮಿತಿಯ ಸದಸ್ಯರು  ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss