Thursday, July 7, 2022

Latest Posts

ಹೊಳಲ್ಕೆರೆ ಶೂಟೌಟ್ ಪ್ರಕರಣದ ಇಬ್ಬರು ಆರೋಪಿಗಳ ಬಂಧನ : ಎಸ್‌ಪಿ ಜಿ.ರಾಧಿಕಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಚಿತ್ರದುರ್ಗ:

ಹೊಳಲ್ಕೆರೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ರಾಜಸ್ಥಾನ ಮೂಲದ ಸಂಜಿತ್‌ಸಿಂಗ್ ಹಾಗೂ ಪೃಥ್ವಿರಾಜ್‌ಸಿಂಗ್ ಎಂದು ಗುರುತಿಸಲಾಗಿದೆ. ಇವರನ್ನು ಆ.28 ರಂದು ಸಂಜೆ 7.30 ರ ಸುಮಾರಿಗೆ ರಾಜಸ್ಥಾನದ ನೋಸರ್ ಬದಲಿಯಾ ಗ್ರಾಮದಲ್ಲಿ ಬಂಧಿಸಿ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಚಿತ್ರದುರ್ಗಕ್ಕೆ ಕರೆ ತರಲಾಗಿದೆ ಎಂದು ಹೇಳಿದರು.
ರಾಜಸ್ಥಾನದ ಸರ್ದಾರ್‌ಪುರ ಗ್ರಾಮದ ಮೂಲ್‌ಸಿಂಗ್ ಕಳೆದ ಐದು ವರ್ಷಗಳಿಂದ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ ಬಟ್ಟೆ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿರುವ ಪ್ರಿಯದರ್ಶಿನಿ ಟೆಕ್ಸ್‌ಟೈಲ್ಸ್ ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದ್ದರು. ಆ.17ರಂದು ಸಂಜೆ 8.50 ರ ಸುಮಾರಿನಲ್ಲಿ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಮುಚ್ಚಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಮೂಲ್‌ಸಿಂಗ್ ಅವರ ತಲೆಗೆ ಶೂಟ್ ಮಾಡಿ ಪರಾರಿಯಾಗಿದ್ದರು.
ಘಟನೆ ಹಿನ್ನೆಲೆ : ರಾಜಸ್ಥಾನ ಮೂಲದ ಕಲ್ಯಾಣ್‌ಸಿಂಗ್ ಕಳೆದ ೨೦ ವರ್ಷಗಳಿಂದ ರಾಮಗಿರಿ ಗ್ರಾಮದಲ್ಲಿ ಚಿನ್ನದ ವ್ಯಾಪಾರ ಮಾಡಿಕೊಂಡಿದ್ದರು. ರಾಜಸ್ಥಾನದ ಸರ್ದಾಪುರ ಗ್ರಾಮದ ಮೂಲ್‌ಸಿಂಗ್ ಎಂಬುವರನ್ನು ರಾಮಗಿರಿಗೆ ಕರೆತಂದು ತನ್ನ ಮನೆಯ ಕೆಳಗಿನ ಮಳಿಗೆಯನ್ನು ಮೂಲ್‌ಸಿಂಗ್ ಅವರಿಗೆ ಬಾಡಿಗೆ ನೀಡಿ ಬಟ್ಟೆ ವ್ಯಾಪಾರ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಈ ಅಂಗಡಿಯಲ್ಲಿ ಮೂಲ್‌ಸಿಂಗ್ ಹಾಗೂ ಸಹೋದರ ಶೇರ್‌ಸಿಂಗ್ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು.
ಒಂದು ದಿನ ಮೂಲ್‌ಸಿಂಗ್ ಸಹೋದರ ಶೇರ್‌ಸಿಂಗ್ ಹಾಗೂ ಮಳಿಗೆಯ ಮಾಲೀಕ ಕಲ್ಯಾಣ್‌ಸಿಂಗ್ ಅವರಿಗೆ ಜಗಳವಾಗಿತ್ತು. ಇದರಿಂದ ಸಿಟ್ಟಿಗೆದ್ದ ಕಲ್ಯಾಣ್‌ಸಿಂಗ್ ಬಟ್ಟೆ ಅಂಗಡಿ ಇರುವ ತನ್ನ ಮಳಿಗೆ ಖಾಲಿ ಮಾಡುವಂತೆ ಸೂಚಿಸಿದ್ದರು. ಇದರಿಂದ ಕುಪಿತನಾದ ಮೂಲ್‌ಸಿಂಗ್ ತನ್ನ ಸಹೋದರರಾದ ಶೇರ್‌ಸಿಂಗ್, ಬಲವೀರ್‌ಸಿಂಗ್ ಹಾಗೂ ಗೋವರ್ಧನ್ ಸಿಂಗ್ ಜೊತೆಗೂಡಿ ಸಂಚಿನಿಂದ ಕಲ್ಯಾಣ್‌ಸಿಂಗ್ ಅವರನ್ನು 2018 ನವೆಂಬರ್ 28 ರಂದು ರಾತ್ರಿ ಕೊಲೆ ಮಾಡಿದ್ದರು.
ಸಾಲದಕ್ಕೆ ಕಲ್ಯಾಣ್‌ಸಿಂಗ್ ಕುಟುಂಬದವರ ವಿರುದ್ಧ ಮೂಲ್‌ಸಿಂಗ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರಿಂದ ಸಿಟ್ಟಿಗೆದ್ದ ಕಲ್ಯಾಣ್‌ಸಿಂಗ್ ಅವರ ಮಗ ಸಂಜಿತ್‌ಸಿಂಗ್ ತನ್ನ ಮಾವ ಪೃಥ್ವಿರಾಜ್‌ಸಿಂಗ್ ಜೊತೆಗೂಡಿ ಮೂಲ್‌ಸಿಂಗ್ ಅವರನ್ನು ಹೊಳಲ್ಕೆರೆಯಲ್ಲಿ ಕೊಲೆ ಮಾಡಿದ್ದರು.
ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಅಭಿನಂದಿಸಿದ್ದು, ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss