ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನಪರಿವರ್ತನೆಯೊಂದಿಗೆ ನಕ್ಸಲೀಯರು ಶರಣಾಗುವ ಭರವಸೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಕ್ಸಲರ ಶರಣಾಗತಿಯನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ನಕ್ಸಲರಿಗೆ ಶರಣಾಗುವಂತೆ ಕರೆ ನೀಡಿದ್ದು, ಮನ ಪರಿವರ್ತನೆ ಮೂಲಕ ಶರಣಾಗುವ ಸಾಧ್ಯತೆ ಇದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದ ಗುಡ್ಡಗಾಡು ಮತ್ತು ಕರಾವಳಿ ಪ್ರದೇಶದ ಪಶ್ಚಿಮ ಘಟ್ಟಗಳ ದಟ್ಟ ಕಾಡಿನಲ್ಲಿ ಹಿಂಸಾತ್ಮಾಕ ಹೋರಾಟದಲ್ಲಿ ತೊಡಗಿರುವ ಮೋಸ್ಟ್ ವಾಂಟೆಡ್ ನಕ್ಸಲೀಯರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮನವಿ ಮೇರೆಗೆ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ನಿರ್ಧರಿಸಿದ್ದಾರೆ.
ವಿಕ್ರಮ್ ಗೌಡ ಎನ್‌ಕೌಂಟರ್ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಮತ್ತು ಕರ್ನಾಟಕ ಪೊಲೀಸರ ನಿರಂತರ ಕೂಂಬಿಂಗ್ ಕಾರ್ಯಾಚರಣೆಯ ನಂತರ ನಕ್ಸಲೀಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ತುಂಗಾ ನಕ್ಸಲ್ ವಿಭಾಗದ ಮುಖ್ಯಸ್ಥರಾಗಿರುವ ಮುಂಡಗಾರು ಲತಾ, ಸುಂದರಿ, ವನಜಾಕ್ಷಿ ಮತ್ತು ಜೀಶಾ ಅವರಂತಹ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಮಾವೋವಾದಿಗಳು; ಆಂಧ್ರಪ್ರದೇಶದ ಕೆ.ವಸಂತ ಮತ್ತು ಮರೆಪ್ಪ ಅರೋಲಿ ಶರಣಾಗಲು ನಿರ್ಧರಿಸಿ ಶಸ್ತ್ರ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.