ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಟ್ಯಾಂಕರ್ ಮತ್ತು ಟಂಟಂ ನಡುವೆ ಭೀಕರ ಅಪಘಾತ ಗುರುವಾರ ಸಂಜೆ ಸಂಭವಿಸಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದಾರೆ.
ಬೂದಿ ತುಂಬಿದ ಟ್ಯಾಂಕರ್, ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಟಂಟಂನಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಜ್ಮಾ ಬೇಗಂ (28), ಬಿಬಿ ಫಾತೀಮಾ (12) , ಅಬುಬಕರ್ (4) ಬಿಬಿ ಮರಿಯಮ್ಮ (5 ತಿಂಗಳು), ಮಹ್ಮದ್ ಪಾಶಾ (20), ಆಟೋ ಚಾಲಕ ಬಾಬಾ (35) ಮೃತಪಟ್ಟಿದ್ದಾರೆ. ಇನ್ನು ಮಹಮದ್ ಹುಸೇನ್ ಎಂಬ ಬಾಲಕನಿಗೆ ಗಂಭಿರ ಗಾಯವಾಗಿದೆ. ಮೃತರು ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ನಿವಾಸಿಗಳಾಗಿದ್ದಾರೆ.
ಟಂಟಂನಲ್ಲಿ ಆಧಾರ ಕಾರ್ಡ್ ತಿದ್ದುಪಡಿಗೆ ಚಿತ್ತಾಪುರಕ್ಕೆ ಹೋಗಿದ್ದ ಕುಟುಂಬ, ಆಧಾರ ತಿದ್ದುಪಡಿ ಮಾಡಿಸಿಕೊಂಡು ವಾಪಸ್ ಬರುವಾಗ ಈ ಘಟನೆ ನಡೆದಿದೆ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಟ್ಯಾಂಕರ್ ಬಿಟ್ಟು ಪರಾರಿಯಾಗಿದ್ದಾನೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.