ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಭಾರೀ ಅಗ್ನಿ ಅವಘ ಸಂಭವಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಶನಿವಾರ ನಡೆದಿದೆ.
ನಯಾಪುರ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದೊಳಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆಯಲ್ಲಿ ಇರಿಸಲಾಗಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಇಡೀ ಪ್ರದೇಶಕ್ಕೆ ಪ್ರತಿಧ್ವನಿಸಿದೆ.
ಸ್ಫೋಟದ ಸದ್ದಿನಿಂದ ಅಕ್ಕಪಕ್ಕದವರು ಎಚ್ಚೆತ್ತುಕೊಂಡು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 3 ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ, ಈ ದುರಂತದಲ್ಲಿ ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ದಿನೇಶ್ ಕಾರ್ಪೆಂಟರ್ (35), ಗಾಯತ್ರಿ ಕಾರ್ಪೆಂಟರ್ (30), ಇಶಿಕಾ (10) ಮತ್ತು ಚಿರಾಗ್ (7) ಎಂದು ಗುರ್ತಿಸಲಾಗಿದೆ. ಮೃತ ದಿನೇಶ್ ಅವರು ಕಟ್ಟಡದ ನೆಲ ಮಹಡಿಯಲ್ಲಿ ಡೈರಿ ನಡೆಸುತ್ತಿದ್ದರು, ಎರಡನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪುನೀತ್ ಗೆಹ್ಲೋಟ್ ಹೇಳಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಡೈರಿಯು ನೆಲಮಹಡಿಯಲ್ಲಿದ್ದು, ಕುಟುಂಬವು ಎರಡನೇ ಮಹಡಿವಾಸವಿತ್ತು. ಮೊದಲ ಮಹಡಿಯ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕುಟುಂಬವು ಎರಡನೇ ಮಹಡಿಯಲ್ಲಿ ವಾಸವಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.