ಹೊಸದಿಗಂತ ವರದಿ,ಮಂಡ್ಯ :
ಕಾವೇರಿ ವಿವಾದವನ್ನು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ಮುಂದೆ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ನ್ಯಾಯಾಲಯದ ಮುಂದೆ ಪದೇ ಪದೇ ಬರುವುದು ಸರಿಯಲ್ಲ ಎಂದು ಸುಪ್ರೀಂ ಛಾಟಿ ಬೀಸಿರುವಾಗ ಈ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ ಮಾಡುವುದಾದರೂ ಹೇಗೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ. ಮಂಜು ತಿಳಿಸಿದ್ದಾರೆ.
ನಗರದ ಪ್ರಧಾನ ಅಂಚೆ ಕಚೇರಿ ಬಳಿ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ನಡೆಸಿದ ಅವರು, ಕಾವೇರಿ ನದಿ ನೀರಿನ ಸಮಸ್ಯೆಯನ್ನು ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿ ಮುಂದೆ ಇಟ್ಟು ಬಗೆಹರಿಸಿಕೊಳ್ಳಬೇಕು. ಅಲ್ಲೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಸಹ ಆದೇಶ ನೀಡಿದೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿ ಮಧ್ಯಪ್ರವೇಶ ಮಾಡಿದಲ್ಲಿ ನ್ಯಾಯಾಂಗ ನಿಂಧನೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ತಮಿಳುನಾಡು ತಮ್ಮ ಕೃಷಿ ಭೂಮಿಯನ್ನು ವಿಸ್ತರಿಸುತ್ತಲೇ ಇದೆ. ನಾಲ್ಕು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಗೆ ಮಾಡಿದೆ. 16 ಸಾವಿರ ಕೋಟಿಗೂ ಹೆಚ್ಚಿನ ಹೊಸ ನೀರಾವರಿ ಯೋಜನೆಗಾಗಿ ನಾಲೆಗಳನ್ನು ನಿರ್ಮಾಣ ಮಾಡಿದೆ. ಇಂತಹ ಕಾನೂನು ಬಾಹಿರ ಕೆಲಸವನ್ನು ಮಾಡುತ್ತಿರುವ ತಮಿಳುನಾಡು ವರ್ತನೆಯನ್ನು ಸಾಕ್ಷಿ ಸಮೇತ ಪ್ರಾಧಿಕಾರದ ಮುಂದಿಡುವುದನ್ನು ಬಿಟ್ಟು ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯೇ ಎಂದು ಮುಖ್ಯಮಂತ್ರಿಗಳನು ಒತ್ತಾಯಿಸಿದ್ದಾರೆ.
ರಾಜ್ಯದ ಸಂಕಷ್ಟ ಪರಿಸ್ಥಿತಿ, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ತಮಿಳುನಾಡಿನ ವಾಸ್ತವ ಪರಿಸ್ಥಿತಿ ಮತ್ತು ಅಲ್ಲಿನ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ ಮತ್ತು ಬೆಳೆ ಪದ್ಧತಿ ಸೇರಿದಂತೆ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲೂ ಎರಡು ಬೆಳೆ ಬೆಳೆಯಲು ಅವಕಾಶವಿದೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಅದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ಬೆಳೆಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ, ನಿರ್ಬಂಧಿಸುವುದನ್ನು ಬಿಟ್ಟು ಇಲ್ಲದ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವ ಸ್ವತಃ ವಕೀಲರು ಆಗಿರುವ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿ ಸುಪ್ರಿಂಗೆ ಹೋದ ತಮಿಳುನಾಡಿನ ಧೋರಣೆಯನ್ನು ಪ್ರಾಧಿಕಾರದಲ್ಲೇ ಪ್ರಶ್ನಿಸಿ ತಕ್ಕ ದಂಡನೆ ಮಾಡಬೇಕಿತ್ತು. ಅದು ಬಿಟ್ಟು ಪ್ರಾಧಿಕಾರ ಆದೇಶ ನೀಡುವ ಮುನ್ನವೇ ನಾವು ಈ ಪ್ರಮಾಣದಲ್ಲಿ ನೀರು ಕೊಡುತ್ತೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಎನ್‌ಡಿಎಯನ್ನು ಸಮರ್ಥವಾಗಿ ಎದುರಿಸಲು ಇಂಡಿಯಾ ಒಕ್ಕೂಟಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಗೆಳೆತನ ಬಯಸಿರುವ ನೀವು ನದಿ ನೀರಿನ ವಿಚಾರದಲ್ಲಿ ಗೆಳೆತನ ತೋರುವುದಿಲ್ಲವೇಕೆ, ಸೋನಿಯಾ, ರಾಹುಲ್‌ಗಾಂಧಿ ಮಾತನ್ನು ಸ್ಟಾಲಿನ್ ತೆಗೆದುಹಾಕುವುದಿಲ್ಲ ಎನ್ನುವ ನಂಬಿಕೆ ಇದೆ. ತಮಿಳುನಾಡಿನ ಮುಖ್ಯಮಂತ್ರಿ ಮನವೊಲಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪದೇ ಪದೇ ವಾಜಯೇಪಿಯವರು, ಮನ್‌ಮೋಹನ್‌ಸಿಂಗ್ ಎರಡು ರಾಜ್ಯಗಳ ಮಧ್ಯಸ್ಥಿಕೆ ವಹಿಸಿದ್ದರು ಎನ್ನುತೀರಿ. ಆ ಸಮಯದಲ್ಲಿ ಪ್ರಾಧಿಕಾರ ರಚನೆಯಾಗಿತ್ತೇ ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶವಿತ್ತೇ ಎಂದು ಪ್ರಶ್ನಿಸಿದ ಅವರು, ತಮಿಳುನಾಡಿಗೆ ನೀರು ನಿಲ್ಲಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗುವ ಮೂಲಕ ಕನ್ನಡಿಗರ ಋಣ ತೀರಿಸಿ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ನಗರಾಧ್ಯಕ್ಷ ವಿವೇಕ್, ನಗರಸಭೆ ಮಾಜಿ ಸದಸ್ಯರಾದ ಪ್ರನಸ್ನಕುಮಾರ್, ಶಿವಕುಮಾರ್, ಮುಖಂಡರಾದ ವಿನೋಭ, ಹೊಸಹಳ್ಳಿ ಶಿವು, ನಾಗರಾಜು, ಆನಂದ್ ಇತರರು ಪತ್ರಚಳವಳಿಯಲ್ಲಿ ಪಾಲ್ಗೊಂಡಿದ್ದರು.