ಮೇಘನಾ ಶೆಟ್ಟಿ ಶಿವಮೊಗ್ಗ
ಜಗತ್ತಿನಲ್ಲಿ ಪರ್ಫ್ಯೂಮ್ ಇಲ್ಲ ಅಂತಿದ್ರೆ? ನಾವು ಹಾಕುವ ಸೋಪ್ನಿಂದ ಹಿಡಿದು, ಕುಡಿಯೋ ಮಾತ್ರೆಗೂ ಒಂದು ವಾಸನೆ ಅಂಥ ಇದ್ದೇ ಇದೆ. ಹಾಗೆ ಎಲ್ಲದರ ವಾಸನೆ ಒಂದೇ ರೀತಿ ಇರುತ್ತದೆ ಅಂತ ಹೇಳೋದಕ್ಕೂ ಆಗೋದಿಲ್ಲ. ಶಾಂಪೂಗೆ ಒಂದು ವಾಸನೆ ಇದ್ದರೆ ಕಂಡೀಷನರ್ಗೆ ಇನ್ನೊಂದು, ಬಳಸುವ ಬ್ಯೂಟಿ ಪ್ರಾಡಕ್ಟ್ಸ್ಗಳಲ್ಲಿ ಎಷ್ಟು ಥರದ ಪರ್ಫ್ಯೂಮ್ಗಳಿಗೆ ಒಮ್ಮೆ ಗಮನಿಸಿ. ಬರೆಯೋ ಹಾಳೆಗೂ ಒಂದು ವಾಸನೆ ಇದೆ, ಹೊಸ ಬಟ್ಟೆಗೂ ಪರಿಮಳ ಇದೆ. ಇಷ್ಟೆಲ್ಲಾ ವಿಭಿನ್ನವಾದ ಪರ್ಫ್ಯೂಮ್ಗಳನ್ನು ಹೇಗೆ ತಯಾರಿಸ್ತಾರೆ?
ಪರ್ಫ್ಯೂಮ್ ತಯಾರಾಗೋದು ಹೇಗೆ? ಭಾರತದಲ್ಲಿ ಎಲ್ಲಿ ಹೆಚ್ಚು ಪರ್ಫ್ಯೂಮ್ ತಯಾರಾಗುತ್ತದೆ? ಇಲ್ಲಿದೆ ಮಾಹಿತಿ..
ಭಾರತದ ಕನ್ನೂರ್ನಲ್ಲಿ ಅತೀ ಹೆಚ್ಚು ಪರ್ಫ್ಯೂಮ್ ಉತ್ಪಾದನೆಯಾಗುತ್ತದೆ. ಲಕ್ನೌನಿಂದ 130 ಕಿ.ಮೀ ದೂರದಲ್ಲಿ ಕನೌಜ್ ಗೆ ಕಾಲಿಡುತ್ತಿದ್ದಂತೆ ಸುಗಂಧ ಮೂಗಿಗೆ ಬಡಿಯುತ್ತದೆ.
ಕಳೆದ 5 ಸಾವಿರ ವರ್ಷಗಳಿಂದ ಕನ್ನುಜ್ನಲ್ಲಿ ಪರ್ಫ್ಯೂಮ್ ಅಂದರೆ ಇತ್ತಾರ್ ಉತ್ಪಾದನೆ ನಡೆಯುತ್ತಲೇ ಇದೆ.
ಇಲ್ಲಿನ ಪ್ರತಿಯೊಬ್ಬರಿಗೂ ಪರ್ಫ್ಯೂಮ್ ಉತ್ಪಾದನೆ ಬಗ್ಗೆ ಎಲ್ಲ ರೀತಿಯ ಮಾಹಿತಿ ಇದೆ. ಈ ಭಾಗದಲ್ಲಿರೋ ಶೇ.80ರಷ್ಟು ಕುಟುಂಬಗಳು ಪರ್ಫ್ಯೂಮ್ ಉತ್ಪಾದನೆಯಲ್ಲಿ ತೊಡಗಿವೆ.
ಇದೇ ಕಾರಣಕ್ಕೆ ಕನೌಜ್ ನನ್ನು ಪರ್ಫ್ಯೂಮ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಇತ್ತಾರ್ ನೈಸರ್ಗಿಕವಾಗಿ ಉತ್ಪಾದನೆ ಮಾಡುವುದು ಇದೇ ಕನ್ನುಜ್ನಲ್ಲಿ.
ಇತಿಹಾಸ ಏನು?
ಪರ್ಫ್ಯೂಮ್ ತಯಾರಿಕೆ ಬಗ್ಗೆ ಆಯುರ್ವೇದದಲ್ಲಿ ಉಲ್ಲೇಖವಾಗಿದೆ. ವೇದಗಳಲ್ಲಿಯೂ ಪರ್ಫ್ಯೂಮ್ಗಳ ಬಗ್ಗೆ ಮಾಹಿತಿ ಇದೆ. ಯಾಗ, ಯಜ್ಞಗಳನ್ನು ಮಾಡುವಾಗ ಎಷ್ಟೋ ವಸ್ತುಗಳನ್ನು ಬೆಂಕಿಗೆ ಅರ್ಪಿಸಲಾಗುತ್ತಿತ್ತು. ಇದರಲ್ಲಿ ಕೆಲವು ವಸ್ತುಗಳನ್ನು ಹಾಕಿದಾಗ ಕೆಟ್ಟ ವಾಸನೆ ಹರಡುತ್ತಿತ್ತು. ಈ ರೀತಿ ಕೆಟ್ಟ ವಾಸನೆಯನ್ನು ಓಡಿಸುವುದಕ್ಕೆ ಪರಿಮಳ ಬೀರುವ ವಸ್ತುಗಳನ್ನು ಬೆಂಕಿಗೆ ಹಾಕಲಾಯ್ತು. ಬೆಂಕಿಯಲ್ಲಿ ಬೆಂದು ಪರಿಮಳ ಗಾಳಿಯಲ್ಲಿ ಸೇರಿತು. ಇಲ್ಲಿಂದ ಸುಗಂಧ ದ್ರವ್ಯಗಳನ್ನು ತಯಾರು ಮಾಡುವ ಪ್ರಕ್ರಿಯೆ ಜಾರಿಯಾಯ್ತು ಎನ್ನುತ್ತಾರೆ ಕನೌಜ್ ನ ಹಿರಿಯರು.
ಸಾಂಪ್ರದಾಯಿಕ ಶೈಲಿ
ಲ್ಯಾಬ್ಗಳಲ್ಲಿ ತಯಾರಾಗೋ ರೀತಿ ಇಲ್ಲಿ ಪರ್ಫ್ಯೂಮ್ ತಯಾರಾಗೋದಿಲ್ಲ. ಐದು ಸಾವಿರ ವರ್ಷಗಳ ಹಿಂದೆ ಹೇಗೆ ಹಂಡೆಯಲ್ಲಿ ಪರ್ಫ್ಯೂಮ್ ತಯಾರಿಸುತ್ತಿದ್ದರೋ ಅದೇ ಸಾಂಪ್ರದಾಯಕ ರೀತಿಯಲ್ಲಿ ಈಗಲೂ ಸುಗಂದ ದ್ರವ್ಯ ತಯಾರಿಸಲಾಗುತ್ತದೆ. ಕನ್ನುಜ್ನಲ್ಲಿ ಹೈಡ್ರೋ ಡಿಸ್ಟಿಲೇಷನ್ ಪ್ರಕ್ರಿಯೆ ಬಳಸಿ ಪರ್ಫ್ಯೂಮ್ ತಯಾರಿಸಲಾಗುತ್ತದೆ. ಇದಕ್ಕೆ ನಿಕಲ್ ಪ್ಲೇಟೆಡ್ ತಾಮ್ರದ ಪಾತ್ರೆಗಳನ್ನು ಬಳಸಲಾಗುತ್ತದೆ. ಇವು ತುಕ್ಕು ಹಿಡಿಯೋದಿಲ್ಲ.
ಹೇಗೆ ತಯಾರಾಗ್ತದೆ ಸುಗಂಧ ದ್ರವ್ಯ?
ದೊಡ್ಡ ಹಂಡೆಯಲ್ಲಿ ನೀರು ಹಾಗೂ ಹೂವಿನ ಎಸಳುಗಳನ್ನು ಹಾಕಲಾಗುತ್ತದೆ. ಇವನ್ನು ಚೆನ್ನಾಗಿ ಕುದಿಸಲಾಗುತ್ತದೆ. ಇತ್ತ ನಿಕಲ್ ಪ್ಲೇಟೆಡ್ ಪಾತ್ರೆಯಲ್ಲಿ ಎಣ್ಣೆ ಹಾಕಲಾಗುತ್ತದೆ. ಇವೆರಡನ್ನೂ ಕೊಳವೆ ಸಹಾಯದಿಂದ ಒಂದು ಮಾಡಲಾಗುತ್ತದೆ. ಹೂವಿನ ದಳಗಳು ನೀರಿನಲ್ಲಿ ಕುದ್ದು, ಇದರ ಪರಿಮಳ ಕೊಳವೆಯಿಂದ ಎಣ್ಣೆಗೆ ಬಂದು ಸೇರುತ್ತದೆ. ಈ ಎಣ್ಣೆ ಸಂಪೂರ್ಣವಾಗಿ ವಾಸನೆಯನ್ನು ಪಡೆದುಕೊಳ್ಳುತ್ತದೆ. ಎಲ್ಲಿಯೂ ಹಬೆ ಹೊರಹೋಗದಂತೆ ಪಾತ್ರೆಗಳನ್ನು ಮುಚ್ಚಲಾಗುತ್ತದೆ. ಇದೆಲ್ಲವೂ ಆಗೋದಕ್ಕೆ ಐದು ಗಂಟೆಯಾದರೂ ಬೇಕು. ಎಣ್ಣೆ ಜೊತೆ ಬಂದಿರುವ ಹೆಚ್ಚಿನ ನೀರನ್ನು ಹೊರಚೆಲ್ಲಲಾಗುತ್ತದೆ.
ಕಂಟೇನರ್ ತಣ್ಣಗಾದ ನಂತರ 30 ದಿನಗಳ ಹೀಗೆ ಸುಗಂಧ ದ್ರವ್ಯವನ್ನು ಮುಚ್ಚಿಡಲಾಗುತ್ತದೆ. ಕನ್ನುಜ್ನಲ್ಲಿ ಆರು ರೀತಿ ಪರ್ಫ್ಯೂಮ್ಗಳನ್ನು ತಯಾರಿಸಲಾಗುತ್ತದೆ. ಗುಲಾಬಿ, ಹೆನ್ನಾ, ಶಮಾಮಾ ಹೆನ್ನಾ, ಮಲ್ಲಿಗೆ ಹಾಗೂ ಬೇಲಾ. ಇಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಮಣ್ಣಿನ ಸುಗಂಧ. ಹೌದು, ಇಲ್ಲಿ ಅದನ್ನೂ ತಯಾರಿಸಲಾಗುತ್ತದೆ. ಹೇಳಬೇಕಂದ್ರೆ ಮಣ್ಣಿನ ಪರ್ಫ್ಯೂಮ್ ತಯಾರಾಗೋದು ಇಲ್ಲಿ ಮಾತ್ರ. ಇದನ್ನು ಮೇಕಪ್ ಹಾಗೂ ಮೆಡಿಸಿನ್ಗಳಲ್ಲಿ ಬಳಸಲಾಗುತ್ತದೆ.
ವರ್ಷಕ್ಕೆ 20 ಲಕ್ಷ ಲೀಟರ್ ಪರ್ಫ್ಯೂಮ್ ಇಲ್ಲಿ ತಯಾರಾಗುತ್ತದೆ. ಸೀಸನ್ಗಳಲ್ಲಿ ಹೇರಳವಾಗಿ ಸಿಗುವ ಹೂವುಗಳನ್ನು ಇಲ್ಲಿ ಬಳಸಲಾಗುತ್ತದೆ.ಇಲ್ಲಿ ತಯಾರಾಗುವ ಪರ್ಫ್ಯೂಮ್ಗಳನ್ನು 50ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ.