ಪಠಾಣ್ ಮೂವಿಗೆ ಟಿಕೆಟ್ಟೇ ಸಿಗ್ತಿಲ್ಲ ಎಂಬ ಅಬ್ಬರದ ಪ್ರಚಾರದಲ್ಲಿ ಸತ್ಯವೆಷ್ಟು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೀವು ಕೆಲವು ಟ್ವಿಟರ್ ಟ್ರೆಂಡುಗಳನ್ನು ನಂಬುವುದಾದರೆ, ಸಿನಿಮಾ ಪಿ ಆರ್ ಸುದ್ದಿಗಳಿಗೂ ನಿಜ ಸುದ್ದಿಗೂ ವ್ಯತ್ಯಾಸ ತಿಳಿಯದವರಾದರೆ- ಶಾರುಖ್ ಖಾನ್ ಹೊಸ ಚಿತ್ರಕ್ಕೆ ಭಾರತವೇ ಹುಚ್ಚೆದ್ದು ಕುಳಿತಿದೆ, ಅದನ್ನು ನೋಡುವುದಕ್ಕೆ ಜನ ಚಿತ್ರಮಂದಿರಗಳ ಮುಂದೆ ಸಾಲಲ್ಲಿ ನಿಂತುಬಿಟ್ಟಿದ್ದಾರೆ ಎಂಬುದೊಂದು ಗ್ರಹಿಕೆಯನ್ನು ಮಾಧ್ಯಮದ ಒಂದು ವರ್ಗ ಅದಾಗಲೇ ನಿಮ್ಮಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದೆ.

ಆದರೆ ಇವತ್ತಿನ ಡಿಜಿಟಲ್ ಯುಗದಲ್ಲಿ ಸ್ವಲ್ಪ ಶ್ರಮವಹಿಸಿದರೆ ಇದರ ಸತ್ಯಾಸತ್ಯತೆ ಸಾಮಾನ್ಯರೂ ತಿಳಿದುಕೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ಕೆಲಸವನ್ನು ಮಾಡಿದ್ದಾರೆ. ಅವರು ಮಾಡಿರೋದಿಷ್ಟೆ. ಚಿತ್ರಮಂದಿರದ ಬುಕಿಂಗ್ ಸೈಟುಗಳಿಗೆ ಹೋಗಿ ಇನ್ನೂ ಬುಕ್ ಮಾಡೋದಕ್ಕೆ ಲಭ್ಯ ಇರುವ ಸೀಟುಗಳನ್ನು ಸ್ನಾಪ್ ಶಾಟ್-ವಿಡಿಯೊಗಳಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಆ ಪ್ರಕಾರ, ಪಠಾಣ್ ಚಲನಚಿತ್ರಕ್ಕೆ ಕಾಸು ಕೊಟ್ಟರೂ ಟಿಕೆಟ್ ಸಿಗದು ಎಂಬಂಥ ಪರಿಸ್ಥಿತಿ ಖಂಡಿತ ಇಲ್ಲ. ದೆಹಲಿಯ ಹಲವು ಥಿಯೇಟರುಗಳಲ್ಲಿ ಸಾಕಷ್ಟು ಸಂಖ್ಯೆಯ ಸೀಟುಗಳು ಖಾಲಿ ಬಿದ್ದಿವೆ. ಭಾನುವಾರದಂಥ ರಜಾದಿನಕ್ಕೂ ಇನ್ನೂ ಸಂಪೂರ್ಣ ಬುಕಿಂಗ್ ಆಗಿಲ್ಲ.

ಜನವರಿ 26ರ ಗಣರಾಜ್ಯ ದಿನದಂದು ಹಲವು ಕಚೇರಿಗಳಿಗೆ ರಜಾ ಇರುತ್ತದೆ. ಇಂಥ ದಿನದಲ್ಲೇ, ಅದೂ ಸಂಜೆಯ ಹೊತ್ತಿನ ಪ್ರದರ್ಶನವೊಂದರ ಸೀಟು ಲಭ್ಯತೆಯನ್ನು ಬೆಂಗಳೂರಿನ ಚಿತ್ರಮಂದಿರವೊಂದರ ಸಂಬಂಧ ಆನ್ಲೈನಿನಲ್ಲಿ ಪರಿಶೀಲಿಸಿದಾಗಲೂ ಸಾಕಷ್ಟು ಸಂಖ್ಯೆಯ ಖಾಲಿ ಸೀಟುಗಳ ಲಭ್ಯತೆ ಇದೆ.

ಪಠಾಣ್ ಚಿತ್ರ ಗೆಲ್ಲುತ್ತದೆಯೋ, ಬಿಡುತ್ತದೆಯೋ ಎಂಬುದೆಲ್ಲ ಈಗ ತೀರ್ಪು ಬರೆಯಬಾರದ ಮತ್ತು ಬರೆಯಲಿಕ್ಕಾಗದ ಚರ್ಚೆ. ಆದರೆ ಈ ಚಿತ್ರದ ಬುಕಿಂಗ್ ಕುರಿತ ಅಬ್ಬರದ ಮಾಹಿತಿಗಳು ಮಾತ್ರ ಸದ್ಯಕ್ಕಂತೂ ಉತ್ಪ್ರೇಕ್ಷೆ ಎಂಬುದು ನಿಚ್ಚಳವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!