Thursday, August 18, 2022

Latest Posts

ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್, ಉಪಮೇಯರ್ : ಜಗದೀಶ್ ಶೆಟ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಹು-ಧಾ ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಬಿಜೆಪಿಯವರೇ ಆಗುವುದು ಸ್ಪಷ್ಟ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ಈ ಬಾರಿಯೂ ಜನರು ಆರ್ಶೀವಾದ ಮಾಡಿದ ಪರಿಣಾಮವಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಜನಪ್ರತಿನಿಧಿಗಳ ವಿಶೇಷ ಸ್ಥಾನ ಹಾಕುವ ಮೂಲಕ 45 ಸ್ಥಾನ ನಾವು ಪಡೆಯಲಿದ್ದೇವೆ. ಅಲ್ಲದೇ ಪಕ್ಷೇತರರು ನಮ್ಮ ಸಂಪರ್ಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೇ ಮೇಯರ್, ಉಪ ಮೇಯರ್ ಆಗೋದ ಖಚಿತ ಎಂದರು.
ಈಗಾಗಲೇ ಬೆಳಗಾವಿಯಲ್ಲಿ ನಮ್ಮವರೇ ಮೇಯರ್ ಉಪಮೇಯರ್ ಆಗಲಿದ್ದಾರೆ. ಗುಲಬರ್ಗಾ ಮಹಾನಗರ ಪಾಲಿಕೆಯಲ್ಲಿ ನಮ್ಮ ಅಭ್ಯರ್ಥಿಗಳೇ ಅತಿ ಹೆಚ್ಚು ಆರಿಸಿ ಬಂದಿದ್ದಾರೆ. ಅಲ್ಲಿಯೂ ಜೆಡಿಎಸ್ ಬೆಂಬಲಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ನಾವೇ ಮೇಯರ್ ಉಪಮೇಯರ್ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನಿಷ್ಠ 45 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದೇವು. ಆದರೆ ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತಪ್ಪಾಗಿದೆ. ಈ ಹಿನ್ನೆಲೆಯಲ್ಲಿ ಸೋಲಾಗಿದೆ. ಇದಕ್ಕೆ ಕಡಿಮೆ ಮತದಾನ, ಶೀಘ್ರ ಚುನಾವಣೆ ಘೋಷಣೆ ಮಾಡಿರುವುದು ಕೂಡಾ ಕಾರಣವಾಗಿದೆ ಎಂದರು.
ಉಪಮೇಯರ್ ದುರ್ಗಮ್ಮಾ ಬಿಜವಾಡ ಫಿಕ್ಸ್: ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಬಂಡಾಯ ಎದ್ದು ಗೆದ್ದು ಆರಿಸಿ ಬಂದ 69 ನೇ ವಾರ್ಡಿನ ದುರ್ಗವ್ವ ಬಿಜವಾಡ ಅವರು ಪಕ್ಷದೊಂದಿಗೆ ಮಾತನಾಡಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಅಲ್ಲದೇ ಉಪಮೇಯರ್ ಮೀಸಲಾತಿ ಇರುವ ಕಾರಣ ಅವರಿಗೆ ಪಕ್ಷದಿಂದ ಉಪಮೇಯರ್ ಮಾಡಲಾಗುವುದು ಎಂದರು.
ಡಿಕೆಶಿ ಆರೋಪಿಸುವುದು ಬಿಡಬೇಕು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು. ತಮ್ಮ ಊಟದ ತಾಟಿನಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ನೋಡುವ ಬದಲು ನಮ್ಮ ತಾಟಿನಲ್ಲಿ ಬಿದ್ದ ನೋಣದ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಅಧಿಕಾರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದೇವೆ ತೋರಿಸಲಿ. ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಕೆಲಸ ಅದು ಸ್ವತಂತ್ರ ಸಂಸ್ಥೆ, ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ ರಾಜಕೀಯವಾಗಿ ಮಾತನಾಡುವುದು ಬಿಡಬೇಕು ಎಂದರು.
11 ದಿನದವರೆಗೆ ಗಣೇಶ ಚತುರ್ಥಿ ಆಚರಣೆ: ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಈಗಾಗಲೇ 5 ದಿನದಿಂದ 11ದಿನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯಲ್ಲೂ ಸಹ ಸಾರ್ವಜನಿಕ ಗಣೇಶೋತ್ಸವವನ್ನು 5 ದಿನದಿಂದ 11ದಿನಕ್ಕೆ ಆಚರಿಸುವಂತೆ ಸಾರ್ವಜನಿಕರಿಂದ ಅಹವಾಲುಗಳು ಬಂದಿವೆ. ಅದರಂತೆ ಸಾರ್ವಜನಿಕ ಗಣೇಶೋತ್ಸವವನ್ನು 11ದಿನ ಆಚರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೆನಕೊಪ್ಪ ಅವರಿಗೆ ತಿಳಿಸಲಾಗಿದೆ. ಅವರು ಜಿಲ್ಲಾಧಿಕಾರಿಗಳ ಜೊತೆ ಸಚಿವರು ಮಾತನಾಡಿ ಗಣೇಶೋತ್ಸವವನ್ನು 11 ದಿನಗಳ ಕಾಲ ಆಚರಿಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!