ಹೊಸ ದಿಗಂತ ವರದಿ, ಬೆಂಗಳೂರು:
ಮಹತ್ವದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ಸಾಧಕ ಬಾಧಕದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.
ಬುಧವಾರ ನ್ಯಾ.ರಿತುರಾಜ ಅವಸ್ಥಿ ಮತ್ತು ನ್ಯಾ. ಸಚಿನ ಮಗ್ದುಂ ಅವರ ವಿಭಾಗೀಯ ಪೀಠ ಈ ಯೋಜನೆ ಹಿನ್ನೆಲೆಯಲ್ಲಿ ದಾಖಲಾದ ಅರ್ಜಿಗಳ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಯೋಜನಾ ವ್ಯಾಪ್ತಿಯ ಸಮಸ್ಯೆಗೆ ಒಳಗಾದ ಪ್ರದೇಶದಲ್ಲಿ ರೈಲ್ವೇ ಹಳಿ ಅಳವಡಿಕೆಯಿಂದ ವನ್ಯ ಜೀವಿಗಳ ಮೇಲೆ ಆಗಬಹುದಾದ ಪರಿಣಾಮದ ಕುರಿತು ಸ್ವತಂತ್ರ ಸರ್ವೇ ನಡೆಸಬೇಕು. ಈ ಹಿನ್ನೆಲೆಯಲ್ಲಿ ಇದುವರೆಗೂ ಬಂದಿರುವ ವರದಿಗಳು, ಸರ್ವೇಗಳಿಂದ ಮಾಹಿತಿ ಪಡೆಯಬಹುದು. ಮಂಡಳಿ ಇಚ್ಛಿಸಿದಲ್ಲಿ ಸರ್ವೇ ಕಾರ್ಯದಲ್ಲಿ ಪರಿಣಿತರನ್ನು ಬಳಸಿಕೊಳ್ಳಬಹುದು. ಆದರೆ ಸರ್ವೇ ಮಾತ್ರ ಸ್ವತಂತ್ರವಾಗಿರಲಿ ಎಂದು ನಿರ್ದೇಶನ ನೀಡಿದೆ.
ಅಭಿವೃದ್ದಿ ಆಗಬೇಕಾದುದು ಅಗತ್ಯ. ಆದರೆ ಇದರಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮವನ್ನೂ ಗಮನಿಸಬೇಕು ಎಂದಿದೆ.