ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೊಡ್ಡ ಉದ್ಯಮಿಗಳು ಕೇವಲ ಹಣ ಮತ್ತು ಲಾಭಕ್ಕಾಗಿ ಇರುವವರು ಎಂಬ ಮೂದಲಿಕೆ ಮಾತುಗಳನ್ನು ಕೇಳಿರುತ್ತೀರಿ. ಅಧಿಕಾರ ಕಳೆದುಕೊಂಡ ನಂತರ ಕೆಲವು ರಾಜಕೀಯ ಪಕ್ಷಗಳು ಸಹ ಸಂಪತ್ತು ಸೃಷ್ಟಿಸುವವರನ್ನು ಜರೆದಿರುವುದನ್ನು ಕಾಣಬಹುದು. ಆದರೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಟಾಟಾ, ರಿಲಾಯನ್ಸ್ ಸೇರಿದಂತೆ ಬಹಳಷ್ಟು ಉದ್ಯಮ ಸಂಸ್ಥೆಗಳು ಬೇರೆ ಬೇರೆ ವಿಧದಲ್ಲಿ ಸಹಾಯ ಮಾಡಿದ್ದನ್ನು ನೋಡಬಹುದು.
ಇದೀಗ ವೇದಾಂತ ಕಂಪನಿಯಿಂದ ಹುಬ್ಬಳ್ಳಿಯಲ್ಲೂ ಇಂಥದೊಂದು ಸಹಕಾರವಾಗಿದೆ. ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ವೇದಾಂತ ಕಂಪನಿ ಕೋವಿಡ್ ಶುಶ್ರೂಷೆಯ ಕೇಂದ್ರವನ್ನು ಸ್ಥಾಪಿಸಿದೆ. ಆಮ್ಲಜನಕ, ತುರ್ತು ನಿಗಾ ಘಟಕ ಸೇರಿದಂತೆ ಎಲ್ಲ ಬಗೆಯ ಸೌಲಭ್ಯಗಳನ್ನು ಹೊಂದಿರುವ ವ್ಯವಸ್ಥೆ ಇದಾಗಿದೆ. ಈ ಬಗ್ಗೆ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಇಂದು ನನ್ನ ಪ್ರಸ್ತಾವನೆಯ ಮೇರೆಗೆ ವೇದಾಂತ ಕಂಪನಿಯ 150 ಕೋಟಿ ರೂಪಾಯಿ CSR ಅಡಿ 100 ಹಾಸಿಗೆ (80 OXYGEN ಬೆಡ್, 10 OXYGEN + ICU ಬೆಡ್, 10 OXYGEN +ICU + VENTILATOR ಬೆಡ್) ಸಾಮರ್ಥ್ಯದ ಅತ್ಯಾಧುನಿಕ "ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ" ಲೋಕಾರ್ಪಣೆ ಮಾಡಲಾಯಿತು. pic.twitter.com/0ivjbDD3fo
— Pralhad Joshi (@JoshiPralhad) June 12, 2021
ವೇದಾಂತದ ಈ ನಡೆಯಿಂದ ಆಗಿರುವ ಬಹಳ ದೊಡ್ಡ ಸಹಾಯ ಎಂದರೆ, ಈಗ ಕೋವಿಡ್ ರೋಗಿಗಳನ್ನು ಇಲ್ಲಿ ಚಿಕಿತ್ಸೆಗೆ ಒಳಪಡಿಸಿ ಕಿಮ್ಸ್ ಆಸ್ಪತ್ರೆಯ ಸೌಲಭ್ಯವನ್ನು ಇತರ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳುವುದಕ್ಕೆ ಅನುವಾಗಲಿದೆ.
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯ ಅತಿಯಾದ ಸಂದರ್ಭದಲ್ಲಿ ಇದೇ ವೇದಾಂತ ಕಂಪನಿ ತೂತುಕುಡಿಯಲ್ಲಿ ಮುಚ್ಚಿಹೋಗಿದ್ದ ತನ್ನ ತಾಮ್ರ ಸಂಸ್ಕರಣಾ ಘಟಕವನ್ನು ತೆರೆದು ಆಮ್ಲಜನಕ ಉತ್ಪಾದನೆ ಮಾಡಿ ಕೊಟ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.