Sunday, August 14, 2022

Latest Posts

ಎಪ್ರಿಲ್ 1ರಿಂದ ಹುದಿಕೇರಿಯಲ್ಲಿ ಕೊಡವ ಹಾಕಿ ನಮ್ಮೆ

ಹೊಸದಿಗಂತ ವರದಿ, ಕೊಡಗು:

ದ.ಕೊಡಗಿನ ಹುದಿಕೇರಿ ಅಂಜಿಕೇರಿ ನಾಡ್ ಕೂಟದ ಆಶ್ರಯದಲ್ಲಿ ಕೊಡವ ಕುಟುಂಬಗಳ ನಡುವೆ ಎಪ್ರಿಲ್ 1 ರಿಂದ 8 ರವರೆಗೆ ಹುದಿಕೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ‘ಕೊಡವ ಹಾಕಿ ನಮ್ಮೆ -2021’ ಆಯೋಜಿಸಲಾಗಿದೆ ಎಂದು ಅಂಜಿಕೇರಿ ನಾಡ್ ಕೂಟ ಮತ್ತು ಪಂದ್ಯಾಟದ ಆಯೋಜಕರು ತಿಳಿಸಿದ್ದಾರೆ.

ಹುದಿಕೇರಿ ಕ್ರೀಡಾ ಮೈದಾನದಲ್ಲಿ ಈ ಬಗ್ಗೆ ಸಭೆಯಲ್ಲಿ ವಿವರಿಸಿದ ಅವರು ಎಲ್ಲಾ ಕೊಡವ ಕುಟುಂಬದಲ್ಲಿ ಪೂರ್ಣ ಪ್ರಮಾಣದ 11 ಆಟಗಾರರ ಕೊರತೆ ಇರುವುದರಿಂದ,  ಕಡಿಮೆ ಸದಸ್ಯರಿರುವ ಕೊಡವ ಕುಟುಂಬಗಳು ಸಹ ಇಂತಹ ಆಟದಿಂದ ವಂಚಿತರಾಗಬಾರದೆಂಬ ಹಿನ್ನೆಲೆಯಲ್ಲಿ 7 ಆಟಗಾರರನ್ನೊಳಗೊಂಡ ಪಂದ್ಯಾಟವನ್ನು ಆಯೋಜಿಸಲಾಗಿದೆ. ತಂಡದಲ್ಲಿ 7 ಆಟಗಾರರೊಂದಿಗೆ ಇತರ ಮೂರು ಬದಲಿ ಆಟಗಾರರನ್ನು  ಸೇರಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಅಂಜಿಕೇರಿ ನಾಡ್‌ನ 8ಗ್ರಾಮಗಳನ್ನು ಒಗ್ಗೂಡಿಸುವ ಉದ್ದೇಶದಿಂದಲೂ, ಕೊಡಗಿನ ಕೊಡವ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸೇರಿಸುವ ಉದ್ದೇಶದಿಂದಲೂ ಮತ್ತು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತಿದೆ. ಬಹಳ ಹಿಂದಿನ ಕಾಲದಿಂದಲೇ ಹುದಿಕೇರಿಯ ಈ ಶಾಲಾ ಮೈದಾನದಲ್ಲಿ ತುಂಬಾ ಕ್ರೀಡಾ ಚಟುವಟಿಕೆ ನಡೆಯುತ್ತಿತ್ತು. ಮಕ್ಕಳು ಮತ್ತು ಯುವಕರಲ್ಲಿ ದೈಹಿಕ ಮಾನಸಿಕ ಸಧೃಡತೆಗಾಗಿ ಪ್ರತಿ ದಿನ ಕ್ರೀಡಾ  ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ  ದುರಭ್ಯಾಸಗಳಿಗೆ ಬಲಿಯಾಗದಂತೆ ತಡೆಯಬಹುದು ಎಂದು ಅವರು ಕ್ರೀಡಾ ಕೂಟದ ಉದ್ದೇಶವನ್ನು ತಿಳಿಸಿದರು.

ಹುದಿಕೇರಿಯಲ್ಲಿ 2002ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವದ ಹಿನ್ನೆಲೆ ಚೆಕ್ಕೇರರ ಕುಟುಂಬದಿಂದ ಚೆಕ್ಕೇರ ಕಪ್ ಟೂರ್ನಮೆಂಟನ್ನು ಆಯೋಜಿಸಲಾಗಿತ್ತು. ಆ ನಂತರ ಈ ಭಾಗದಲ್ಲಿ ಅಂತಹ ಟೂರ್ನಮೆಂಟ್ ನಡೆದಿಲ್ಲ. ವಿವಿಧ ಕಾರಣಗಳಿಂದ 2ವರ್ಷಗಳಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವವೂ ನಡೆದಿಲ್ಲ. ಆದ್ದರಿಂದ ಈ ಬಾರಿ ಅಂಜಿಕೇರಿ ನಾಡ್ ಕೊಡವ ಕೌಟುಂಬಿಕ ಹಾಕಿ ನಮ್ಮೆ  ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದ್ದು 61 ಕೊಡವ ಕುಟುಂಬಗಳು ಹೆಸರು ನೋಂದಾಯಿಸಿವೆ. ಮಾರ್ಚ್ 15ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಮೊದಲು ಬಂದ 100 ಕುಟುಂಬಗಳಿಗೆ ಮಾತ್ರ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ನಂತರ ಬಂದ ಕುಟುಂಬಗಳಿಗೆ ಪ್ರವೇಶವನ್ನು ಪರಿಗಣಿಸುವುದಿಲ್ಲ ಎಂದು ವಿವರಿಸಿದರು.

ಹೆಣ್ಣು ಮಕ್ಕಳಿಗೂ ಅವಕಾಶ: ಟೂರ್ನಮೆಂಟ್‌ನ ತಂಡದಲ್ಲಿ ಹೆಣ್ಣು ಮಕ್ಕಳಿಗೂ ಆಟವಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮದುವೆಯಾಗಿರುವ ಹೆಣ್ಣು ಮಕ್ಕಳು ತಮ್ಮ ತಾಮನೆ ತಂಡ ಅಥವಾ ಬಾಕೆಮನೆ ತಂಡದಲ್ಲಿ ಯಾವುದಾದರೊಂದು ತಂಡದಲ್ಲಿ ಮಾತ್ರ ಆಡಲು ಅವಕಾಶವಿದ್ದು,  ಎರಡೂ ತಂಡದಲ್ಲಿ ಆಡಲು ಅವಕಾಶವಿಲ್ಲ ಎಂದು ಟೂರ್ನಮೆಂಟ್‌ನ ನಿಯಮವನ್ನು ತಿಳಿಸಿದರು.

ಟೂರ್ನಮೆಂಟ್‌ನ ವಿಜೇತ ಹಾಗೂ ದ್ವಿತೀಯ ಸ್ಥಾನಿ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವಿದ್ದು, ಈ ಟೂರ್ನಮೆಂಟ್‌ಗೆ ಅಂಜಿಕೇರಿ ನಾಡ್‌ನ ಎಲ್ಲಾ ಗ್ರಾಮಸ್ಥರು ಮತ್ತು ಎಲ್ಲಾ ಕ್ರೀಡಾಭಿಮಾನಿಗಳು ಸಹಕಾರ ನೀಡಬೇಕೆಂದು ಕೋರಿದರು.

ತಂಡ ನೋಂದಣಿಗೆ ಚೆಕ್ಕೇರ ಆದರ್ಶ್ 8105407337, ಚೆಕ್ಕೇರ ವಿವೇಕ್ ಬೋಪಣ್ಣ 9986252474, ಚಂಗುಲಂಡ ಅಯ್ಯಪ್ಪ 9482275243, ಅಜ್ಜಿಕುಟ್ಟೀರ ಪ್ರಖ್ಯಾತ್ ಪೂಣಚ್ಚ 9580797773 ಇವರನ್ನು ಸಂಪರ್ಕಿಸಬಹುದೆಂದರು.

ಈ ಸಂದರ್ಭ ಅಂಜಿಕೇರಿ ನಾಡ್ ಕೂಟದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಖ್ಯಾತ್ ಪೂಣಚ್ಚ, ಕಾರ್ಯದರ್ಶಿ ಚಂಗುಲಂಡ ಅಯ್ಯಪ್ಪ, ಆಯೋಜಕರಾದ ಚೆಕ್ಕೇರ ಆದರ್ಶ್, ಸದಸ್ಯರಾದ ಚೆಕ್ಕೇರ ರಮೇಶ್ ಚಿಟ್ಟಿಯಪ್ಪ, ನೂರೇರ ಕಿಟ್ಟು ಕುಟ್ಟಪ್ಪ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss