ಅರ್ಧ ಗಂಟೆಯಲ್ಲಿ ಭಾರೀ ಮೊತ್ತದ ಚಿನ್ನಾಭರಣ-ನಗದು ಕಳವು ಕೊಡಗಿನ ಪಾಲಿಬೆಟ್ಟದಲ್ಲಿ ಹಾಡಹಗಲೇ ನಡೆಯಿತು ಕೃತ್ಯ

ಹೊಸದಿಗಂತ ವರದಿ ಮಡಿಕೇರಿ:
ಮನೆ ಮಂದಿ‌ ಪೇಟೆಗೆ ಹೋಗಿ ಬರುವಷ್ಟರಲ್ಲಿ 100 ಪವನ್ ಚಿನ್ನಾಭರಣ ಹಾಗೂ ಭಾರೀ ಮೊತ್ತದ ನಗದು ಅಪಹರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಉಪ ಠಾಣೆಯಿಂದ ಕೇವಲ ಒಂದು ಕಿ.ಮೀ.ದೂರದಲ್ಲಿರುವ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಮನೆ ಮಾಲಕರ ಚಲನವಲನವನ್ನು ಹತ್ತಿರದಿಂದ ಬಲ್ಲವರೇ ಈ ಕೃತ್ಯ ನಡೆಸಿರುವ ಬಗ್ಗೆ ಶಂಕೆ‌ ವ್ಯಕ್ತವಾಗಿದೆ.

ಪಾಲಿಬೆಟ್ಟ ಪೊಲೀಸ್ ಠಾಣೆಯಿಂದ ಕೇವಲ ಒಂದು ಕಿ.ಮೀ. ಅಂತರದೊಳಗಿರುವ ಪಾಲಿಬೆಟ್ಟ-ಅಮ್ಮತ್ತಿ ರಸ್ತೆಯಲ್ಲಿರುವ ಕೂತಂಡ ಸುಬ್ರಮಣಿ ಎಂಬ ಹಿರಿಯ ನಾಗರಿಕ, ಕಾಫಿ ಬೆಳೆಗಾರರ ಮನೆಯಲ್ಲಿ ಭಾನುವಾರ (ಜೂ.12) ಹಾಡಹಗಲೇ ಈ ಘಟನೆ ನಡೆದಿದೆ.
ಸುಬ್ರಮಣಿ ಹಾಗೂ ಅವರ ಪತ್ನಿ ಮಧ್ಯಾಹ್ನ 12 ‌ಸುಮಾರಿಗೆ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿರುವ ಪಾಲಿಬೆಟ್ಟ ಪಟ್ಟಣಕ್ಕೆ ಹೋಗಿ ಹಾಲು ಖರೀದಿಸಿ 12.30ರ ಸುಮಾರಿಗೆ ಮನೆಗೆ ಹಿಂತಿರುಗಿದ್ದು, ಈ ಅವಧಿಯಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆನ್ನಲಾಗಿದೆ.

ಹೆಚ್ಚಿನ ಸಮಯ ಕೊಡಗಿನಿಂದ ಹೊರಗೆ‌ ವಾಸವಿರುವ ಕೂತಂಡ ಸುಬ್ರಮಣಿ ಮತ್ತು ಅವರ ಧರ್ಮಪತ್ನಿ ವರ್ಷದ ಕೆಲವು ದಿನ ಮಾತ್ರ ಪಾಲಿಬೆಟ್ಟಕ್ಕೆ ಬಂದು ನೆಲಸುತ್ತಿದ್ದರೆಂದು‌ ಹೇಳಲಾಗಿದೆ. ಈ ಕೃತ್ಯ ನಡೆಯುವ ಎರಡು ದಿನಗಳ ಹಿಂದೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಪಾಲಿಬೆಟ್ಟದ ತಮ್ಮ ತೋಟದ ಮನೆಗೆ ಆಗಮಿಸಿದ್ದ ದಂಪತಿ, ಪಾಲಿಬೆಟ್ಟದ ಬ್ಯಾಂಕ್ ಆಫ್ ಬರೋಡಾದ ಸೇಫ್ ಲಾಕರ್’ನಲ್ಲಿಟ್ಟಿದ್ದ ವಜ್ರ ಹಾಗೂ ಚಿನ್ನ ಸೇರಿದಂತೆ ಸುಮಾರು 100 ಪವನ್ ಆಭರಣ ಹಾಗೂ 10 ಲಕ್ಷ ನಗದನ್ನು ತಂದು ಮನೆಯಲ್ಲಿಟ್ಟಿದ್ದರು ಎನ್ನಲಾಗಿದೆ.

ಇದನ್ನು ಸಮೀಪದಿಂದ ಬಲ್ಲವರೇ, ವೃದ್ಧ ದಂಪತಿ ಮನೆಯಲ್ಲಿಲದ‌ ಸಂದರ್ಭದಲ್ಲಿ ಕಳವು ನಡೆಸಿರಬಹುದೆಂದು ಶಂಕಿಸಲಾಗಿದೆ.
ಕೃತ್ಯ ನಡೆದ ಸಂದರ್ಭದಲ್ಲಿನ‌ ಸಿಸಿ ಕ್ಯಾಮರಾಗಳ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!