Thursday, August 11, 2022

Latest Posts

ಮಾ.15 ರಂದು ಮಡಿಕೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಹೊಸದಿಗಂತ ವರದಿ, ಕೊಡಗು:

ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಮಾ.15 ರಂದು ನಗರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆಯೆಂದು ಸಂಸ್ಥೆಯ ಸಹಕಾರ್ಯದರ್ಶಿ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 15 ರಂದು ಬೆಳಗ್ಗೆ 9.30ಕ್ಕೆ ನಗರದ ಬಾಲಭವನದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಮನವಿ ಮಾಡಿದರು.

ಸಂಘಟನೆಯ ಅಧ್ಯಕ್ಷ ಹೆಚ್.ಆರ್. ವಿನು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮ್‌ದಾಸ್, ಮಡಿಕೇರಿ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ, ಮಡಿಕೇರಿ ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ಕಾರ್ಯಪ್ಪ ಹಾಗೂ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.

ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಪತ್ರಕರ್ತ ಚಂದನ್ ನಂದರಬೆಟ್ಟು ಬರೆದಿರುವ ‘ನೆತ್ತರು’ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ಹೆಚ್ಚು ಬಾರಿ ರಕ್ತ ಮಾಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಮಾಹಿತಿ ನೀಡಿದರು.

ಕಳೆದ ಎರಡು ವರ್ಷದ ಹಿಂದೆ ಮಂಗಳೂರು, ಮೈಸೂರು ಹಾಗೂ ಮಡಿಕೇರಿಯಲ್ಲಿ ರಕ್ತದಾನಕ್ಕೆ ಸಂಬಂಧಿಸಿದಂತೆ ಇದ್ದ ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ತೊಡಗಿಸಿಕೊಂಡಿದ್ದ ಸ್ಥಳೀಯ ಯುವಕರಾದ ಆಂಜುಮ್ ಹಾಗೂ ಜಲೀಲ್ ನೇತೃತ್ವದಲ್ಲಿ ‘ಕೊಡಗು ಬ್ಲಡ್ ಡೋರ‍್ಸ್’ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ, ರೋಗಿಗಳಿಗೆ ಉಚಿತ ರಕ್ತದ ಪೂರೈಕೆ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಪುತ್ತೂರು, ಸುಳ್ಯ, ಮಂಗಳೂರು, ಮಣ ಪಾಲ, ಉಡುಪಿ, ಹಾಸನ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಇತರ ದೇಶ ವಿದೇಶದಲ್ಲೂ ರಕ್ತದಾನಿಗಳನ್ನು ಸಂಪರ್ಕಿಸುವ ಮೂಲಕ ಉಪಯುಕ್ತ ಕೆಲಸಗಳನ್ನು ಮಾಡುತ್ತಿದೆ ಎಂದರು.

ಪ್ರಸ್ತುತ ಆರು ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಿಕೊಂಡಿರುವ ಸಂಸ್ಥೆ 1200 ಕ್ಕಿಂತಲೂ ಹೆಚ್ಚಿನ ರಕ್ತದಾನಿಗಳನ್ನು ಸದಸ್ಯರನ್ನಾಗಿ ಹೊಂದಿದೆ. ಪ್ರಾರಂಭದ ಮೊದಲ ವರ್ಷ 700 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 940 ಯೂನಿಟ್ ರಕ್ತದ ವ್ಯವಸ್ಥೆ ಮಾಡಲಾಗಿದೆ ಎಂದರು.

ಯಾವುದೇ ಫಲಾಪೇಕ್ಷೆವಿಲ್ಲದೆ ರಕ್ತದಾನಿಗಳು ಹಾಗೂ ಸದಸ್ಯರು ವಾಟ್ಸಾಪ್ ಗ್ರೂಪ್ ಮುಖಾಂತರ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದ್ದು, ಇದಕ್ಕೆ ಪೂರಕ ಎಂಬಂತೆ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಸೇವಾ ಹೃದಯ ಚಾರಿಟೇಲ್, ಎ.ಡಬಲ್ಯು.ಓ. ಗ್ರೂಪ್ ಕರ್ನಾಟಕ, ಆರ್.ಜಿ.ಎಸ್. ಮೈಸೂರು, ರಕ್ತದಾನಿಗಳ ಬಳಗ ಮೈಸೂರು, ಬ್ಲಡ್ ಡೋನರ್ಸ್ ಹಾಸನ ವಿಭಾಗ, ಶಿವಮೊಗ್ಗದ ಯಶಸ್ವಿ ರಕ್ತದಾನಿಗಳ ಬಳಗ, ರಕ್ತ ನೀಡಿ ಜೀವ ಉಳಿಸಿ ಶ್ರೀಧರ್ ಕುಮುಟಾ, ಅಭಯಹಸ್ತ ಮಣ ಪಾಲ್, ಹೆಲ್ಪ್ ಹ್ಯಾಂಡ್ಸ್ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಗಳು ತಮಗೆ ಸಹಕಾರ ನೀಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರೂಪ್‌ನ ಅಧ್ಯಕ್ಷ ಹೆಚ್.ಆರ್. ವಿನು, ಕಾರ್ಯದರ್ಶಿ ಮೈಕಲ್ ವೇಗಸ್, ಸಂಘಟನಾ ಕಾರ್ಯದರ್ಶಿ ಸಮೀರ್ ಹಾಗೂ ನಿರ್ದೇಶಕ ಮನ್ಸೂರ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss