ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರೂ ವಾಸವಿಲ್ಲದ ಮನೆಯೊಂದರ ಫ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಜನವಸತಿಯಿಲ್ಲದ ಮನೆಯೊಂದರ ಫ್ರಿಡ್ಜ್‌ನಲ್ಲಿ ತಲೆಬುರುಡೆ ಹಾಗೂ ಮೂಳೆಗಳು ಪ್ಯಾಕ್ನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಜಾಗವನ್ನು ಸಮಾಜಘಾತುಕ ಶಕ್ತಿಗಳ ತಾಣವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರದೇಶ ಪಂಚಾಯಿತಿ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳವನ್ನು ಶೋಧಿಸಿದ್ದರು. ಹುಡುಕಾಟದ ಸಮಯದಲ್ಲಿ, ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಸುಮ್ಮನೆ ಕುತೂಹಲಕ್ಕೆಂದು ಫ್ರಿಡ್ಜ್ ಬಾಗಿಲು ತೆರೆದಾಗ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ.
ಮೂಳೆಗಳನ್ನು ಮೂರು ಪ್ರತ್ಯೇಕ ಕವರ್‌ಗಳಲ್ಲಿ ಪ್ಯಾಕ್ ಮಾಡಿರುವುದು ಕಂಡುಬಂದಿದೆ. ತಲೆಬುರುಡೆಯು ಹಲವಾರು ವರ್ಷಗಳಷ್ಟು ಹಳೆಯದಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ನಿಖರವಾದ ವಯಸ್ಸನ್ನು ಪರೀಕ್ಷೆಯ ನಂತರವೇ ನಿರ್ಧರಿಸಬಹುದು. ಮನೆಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ ಮತ್ತು ಫ್ರಿಡ್ಜ್‌ನಲ್ಲಿ ಕಂಪ್ರೆಸರ್ ಇರಲಿಲ್ಲ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ.