Thursday, February 25, 2021

Latest Posts

ಅಂತರಂಗದಲ್ಲಿ ಮಾನವೀಯತೆ, ಸಹಬಾಳ್ವೆಯ ಗುಣಾತ್ಮಕ ಬದಲಾವಣೆಗಳಾದಾಗ ಸದ್ಭಕ್ತನಾಗಲು ಸಾಧ್ಯ: ಮರುಳಸಿದ್ದ ಸ್ವಾಮೀಜಿ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಮನುಷ್ಯನ ಅಂತರಂಗದಲ್ಲಿ ಗುಣಾತ್ಮಕ ಬದಲಾವಣೆಗಳಾದ ಸದ್ಭಕ್ತನಾಗಲು ಸಾಧ್ಯ ಎಂದು ನಗರದ ಬಸವ ತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಬೀಕನಹಳ್ಳಿಯಲ್ಲಿ ಶ್ರೀ ಮಲ್ಲೇಶ್ವರ, ಶ್ರೀ ಕಲ್ಲೇಶ್ವರ ದೇವಾಲಯ ಪ್ರವೇಶ ಹಾಗೂ ಕಣಿವೆ ರುದ್ರೇಶ್ವರ ಉತ್ಸವ ಮೂರ್ತಿ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಸಮಾಜದಲ್ಲಿ ಪಾಪ ಕೃತ್ಯಗಳನ್ನು ಎಸಗಿ, ಮನದಲ್ಲಿ ಕಲ್ಮಶವನ್ನು ತುಂಬಿಕೊಂಡು ಪಾಪ ತೊಳೆಯಲು ಗಂಗೆಯಲ್ಲಿ ಸ್ನಾನ ಮಾಡಿದರೆ ಫಲವಿಲ್ಲ. ಬದಲಾಗಿ ಅಂತರಂಗದಲ್ಲಿ ಮಾನವೀಯತೆ, ಸಹಬಾಳ್ವೆಯ ಗುಣಾತ್ಮಕ ಬದಲಾವಣೆಗಳಾದಾಗ ಸದ್ಬಕ್ತನಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ರೈತಾಪಿ ಕುಟುಂಬಗಳು ಪ್ರತಿ ಮನೆಯಲ್ಲೂ ದನಕರುಗಳನ್ನು ಹೊಂದಿದಾಗ ಮನೆಗೆ ಶೋಭೆ ತರಲಿದೆ. ಇಲ್ಲವಾದರೆ ಅದೊಂದು ನರಕವಿದ್ದಂತೆ ಭಾಸವಾಗುತ್ತದೆ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ದೇವಾಲಯ ಜೀರ್ಣೋದ್ಧಾರಕ್ಕೆ ಕೊಡುಗೈ ದಾನಿಗಳು, ಗ್ರಾಮಸ್ಥರ ದೇಣಿಗೆಯಿಂದ ದೇವಾಲಯ ಸುಂದರವಾಗಿ ನಿರ್ಮಾಣಗೊಂಡಿದೆ. ವಿಶಾಲ ಮನಸ್ಥಿತಿ ಮೂಲಕ ಆಲೋಚನೆಗಳು ಕಾರ್ಯಗತವಾಗಿದೆ. ಬದುಕಿನಲ್ಲಿ ನಂಬಿಕೆ ವಿಶ್ವಾಸದೊಂದಿಗೆ ಸನ್ಮಾರ್ಗದಲ್ಲಿ ಜೀವನ ನಡೆಸುವಂತಾಗಲಿ ಎಂದು ಹೇಳಿದರು.
ಕಲ್ಲೇಶ್ವರ ದೇವಾಲಯ ಜೀಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಬೀಕನಹಳ್ಳಿ ಸೋಮಶೇಖರ್ ಮಾತನಾಡಿ ಬೀಕನಹಳ್ಳಿ ಚಾಮುಂಡೇಶ್ವರಿ ದೇವಾಲಯಕ್ಕೆ ಇತಿಹಾಸವಿದ್ದು ಚೋಳರ ಕಾಲದಲ್ಲಿ ನಿರ್ಮಿತವಾಗಿದೆ ಎಂಬ ಐತಿಹ್ಯವಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಇದೀಗ ಕಾಯಕಲ್ಪ ಮಾಡಲಾಗಿದೆ. ಜಿ.ಪಂ ವತಿಯಿಂದ ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಸಾಹಿತಿ ಚಟ್ನಳ್ಳಿಮಹೇಶ್ ಮಾತನಾಡಿ ಪೂರ್ವಜರಲ್ಲಿದ್ದ ನಿಷ್ಕಲ್ಮಶ ಭಕ್ತಿಯನ್ನು ಯುವ ಜನತೆ ಅರಿಯಬೇಕಿದೆ. ಮೂಡನಂಬಿಕೆಗಳನ್ನು ಬಿಟ್ಟು ವಿಚಾರವಾದಿ ಮಠಾಧೀಶರ ತತ್ವ ಸಿದ್ದಾಂತಗಳನ್ನು ಆಲೋಚಿಸಿ ನಡೆಯಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ದೇವಾಲಯ ನಿರ್ಮಾಣವು ಜನತೆಯಲ್ಲಿ ಬಾಂಧವ್ಯ ಬೆಸುಗೆಯ ಕೆಲಸವಾಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಆಚಾರ ವಿಚಾರಗಳನ್ನು, ಭಕ್ತಿ ಭಾವವನ್ನು ಬೆಳೆಸಲು ದೇವಾಲಯಗಳು ಭಕ್ತಿ ಕೇಂದ್ರವಾಗಿದೆ ಎಂದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಹೆಚ್ ದೇವರಾಜ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್,ಮಾಜಿ ನಗರಸಭೆ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ, ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ನಿರ್ದೇಶಕ ಪ್ರಕಾಶ್‍ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ ಕಲ್ಮುರಡಪ್ಪ, ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ನಂಜಪ್ಪ, , ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!