ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ, ಉಡುಪಿ:
ತೌಕ್ತೆ ಚಂಡಮಾರುತದ ರೌದ್ರಾವತಾರಕ್ಕೆ ಮಂಗಳೂರು ಎಂ.ಆರ್.ಪಿ.ಎಲ್.ನ ನಿರ್ವಹಣೆಗೆ ಸಂಬಂಧಪಟ್ಟ ಟಗ್ಗ್ (ದೋಣಿ)ಮಗುಚಿ ಬಿದ್ದಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಟಗ್ಗ್ ನಲ್ಲಿದ್ದ ಇನ್ನೂ ಏಳು ಮಂದಿ ನಾಪತ್ತೆಯಾಗಿದ್ದಾರೆ.
ಕೊಲ್ಕತ್ತಾ ಮೂಲದ ಮೊಮಿರುಲ್ ಮುಲ್ಲಾ (34) ಮತ್ತು ಕರಿಮುಲ್ ಶೇಖ್ (24) ರಕ್ಷಿಸಲ್ಪಟ್ಟವರು. ಜೊತೆಯಲ್ಲಿ ಏಳು ಮಂದಿ ನಾಪತ್ತೆಯಾಗಿದ್ದಾರೆ. ಟಗ್ಗ್ ಹೆಜಮಾಡಿ ಸಮೀಪ ಪತ್ತೆಯಾಗಿದೆ ತಿಳಿದು ಬಂದಿದೆ.
ಮಂಗಳೂರಿನ ಸಮೀಪ ದುರಂತ ಸಂಭವಿಸಿದ್ದು, ಬೆಳಗ್ಗೆ 9.30ರಿಂದ ನಿರ್ವಹಣಾ ಕಾರ್ಯಾಚರಣೆ ಮಾಡುತ್ತಿದ್ದ ಟಗ್ಗ್ ಸಂಪರ್ಕ ಕಳೆದುಕೊಂಡಿತ್ತು. ಮುಂಬೈ ಅಲಾಯನ್ಸ್ ಸಂಸ್ಥೆಯ ಟಗ್ಗ್ ಇದಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಟಗ್ಗ್ ವಾಪಸ್ ದಡಕ್ಕೆ ಬರುತ್ತಿತ್ತು. ಈ ವೇಳೆ ಟಗ್ಗ್ ಗೆ ಬೃಹತ್ ಅಲೆಯೊಂದು ಅಪ್ಪಳಿದ್ದು, ಟಗ್ಗ್ ಮಗುಚಿ ಬಿದ್ದಿತ್ತು. ಸಂಜೆ 5.25ರ ಸುಮಾರಿಗೆ ಕಾಪು ತಾಲೂಕಿನ ಮಟ್ಟು ಕೊಪ್ಲ ಬಳಿ ಸಮುದ್ರ ತೀರದಲ್ಲಿ ತೆರೆಗಳ ಸುಳಿಯಲ್ಲಿ ಸಿಲುಕಿದ್ದರು. ಅವರನ್ನು ಸ್ಥಳೀಯರು ರಕ್ಷಿಸಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಚಂಡಮಾರುತದಿಂದ ಕಡಲು ಪ್ರಕ್ಷುಬ್ಧವಾಗಿ ಈ ದುರ್ಘಟನೆ ನಡೆದಿದೆ. ಎಂ.ಆರ್.ಪಿ.ಎಲ್.ಗೆ ಆಮದಾಗುವ ಕಚ್ಚಾ ತೈಲ ಹಡಗಿಗೆ ಪೈಪ್ ಸಂಪರ್ಕ ಕಲ್ಪಿಸುವ ಕೆಲಸವನ್ನು ಒಂಬತ್ತು ಜನರ ತಂಡ ನಿರ್ವಹಿಸುತ್ತದೆ. ಆದರೆ ಭಾರೀ ಅಲೆಗಳ ಅಬ್ಬರಕ್ಕೆ ಸಿಲುಕಿ ಸತತ 8 ತಾಸುಗಳ ಸಮುದ್ರಲ್ಲಿ ಈಜಿರುವ ಸಾಧ್ಯತೆ ಇದೆ. ಜೀವ ರಕ್ಷಕ ಟ್ಯೂಬ್ ಹಾಕಿಕೊಂಡಿದ್ದ ಇಬ್ಬರೂ ಸತತ ಈಜಿ ಜೀವ ಉಳಿಸಿಕೊಂಡಿದ್ದಾರೆ.
ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಕುಮಾರ್, ಹೆಜಮಾಡಿ ಠಾಣೆಯ ನಿರೀಕ್ಷಕರು, ಕಾಪು ತಹಶೀಲ್ದಾರ್ ಪ್ರತಿಮಾ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.