ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ,ಭಟ್ಕಳ:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ತೌಕ್ತೆ ಚಂಡಮಾರುತದ ಕಾರಣದಿಂದ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಡಲ ತೀರವನ್ನು ಡೇಂಜರ್ ಜೋನ್ ಎಂದು ಗುರುತಿಸಲಾಗಿದ್ದು, ತೀರದಲ್ಲಿನ ನಿವಾಸಿಗಳಿಗೆ ಪ ಪಂ ಮುಖ್ಯಾಧಿಕಾರಿ ಅಜಯ್ ಭಂಡಾರಕರ್ ಅವರು ತೆರಳಿ ಜಾಗೃತರಾಗಿರುವಂತೆ ತಿಳಿಸಿದ್ದಾರೆ. ಇಲ್ಲಿ ಭಾರಿ ಗಾತ್ರದ ಅಲೆಗಳು ಸಮುದ್ರದಲ್ಲಿ ಏಳುತ್ತಿದ್ದು, ತೀರದಲ್ಲಿನ ತಡೆಗೋಡೆ, ರಸ್ತೆದಾಟಿ ಸಮುದ್ರದ ನೀರು ನುಗ್ಗುತ್ತಿದೆ.
ತಾಲೂಕಿನಾದ್ಯಂತ ಎರಡು ದಿನಗಳಿಂದ ಬಿರುಗಾಳಿ ಸಮೇತ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತಾಲೂಕಿನ ಕಡಲತೀರ ಪ್ರದೇಶಗಳಾದ ಬಂದರ್ ತಲಗೋಡು, ಕರಿಕಲ್, ಜಾಲಿ, ಜಾಲಿಕೋಡಿ, ತೆಂಗಿನಗುಂಡಿ, ಅಳ್ವೆಕೋಡಿ, ಮುರ್ಡೇಶ್ವರ ಸೇರಿದಂತೆ ಹಲವೆಡೆ ರಕ್ಕಸಗಾತ್ರದ ಅಲೆಗಳು ತಡೆಗೋಡೆಯನ್ನು ದಾಟಿ, ತೀರದಲ್ಲಿನ ಮನೆ ಹಾಗೂ ನೂರಾರು ಎಕರೆ ತೋಟ, ಗದ್ದೆಗಳಿಗೆ ಸಮುದ್ರದ ಉಪ್ಪುನೀರು ನುಗ್ಗಿ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತೀರದಲ್ಲಿನ ಎಲ್ಲಾ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಗಾಳಿ ಮಳೆಗೆ ತಾಲೂಕಿನಾದ್ಯಂತ ಸುಮಾರು ೨೨ ವಿದ್ಯುತ್ ಕಂಬಗಳು, ೪ ಟ್ರಾನ್ಸ್ಫಾರ್ಮರ್, ವಿದ್ಯುತ್ ಪರಿಗಳು ಸೇರಿ ಹೆಸ್ಕಾಂಗೆ ಒಟ್ಟೂ ರೂ ೫.೦೭ ಲಕ್ಷ ಹಾನಿಯಾಗಿದೆ ಎಂದು ಹೆಸ್ಕಾಂ ಎಇಇ ಮಂಜುನಾಥ ತಿಳಿಸಿದ್ದಾರೆ.