ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ, ಕಾಸರಗೋಡು:
ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 139.855 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಬಿರುಸಿನ ಗಾಳಿ, ಧಾರಾಕಾರ ಮಳೆ ಹಾಗೂ ಕಡಲ್ಕೊರತ ತಲೆದೋರಿದ್ದರೂ, ದೊಡ್ಡ ಪ್ರಮಾಣದ ನಾಶ ನಷ್ಟ ಸಂಭವಿಸಿಲ್ಲ.
ಕಾಸರಗೋಡು ತಾಲೂಕಿನಲ್ಲಿ 9 ಮನೆಗಳು ಭಾಗಶಃ ಹಾನಿಗೊಂಡಿವೆ. ಅಪಾಯ ಸೂಚನೆಯ ಹಿನ್ನೆಲೆಯಲ್ಲಿ ಕಾಸರಗೋಡು ಚೇರಂಗೈ ಸಮುದ್ರ ಕರಾವಳಿಯ 4 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಂಜೇಶ್ವರ ತಾಲೂಕಿನಲ್ಲಿ 3 ಮನೆಗಳು ಹಾನಿಗೊಂಡಿವೆ. ಉಪ್ಪಳ ಮೂಸೋಡಿ ಕರಾವಳಿಯಲ್ಲಿ 19 ಮನೆಗಳು ಭಾಗಶಃ ಹಾನಿಗೊಂಡಿವೆ. ಹೊಸದಾಗಿ 97 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳ ನಿಯಂತ್ರಣ ಕೊಠಡಿಗಳು ಕಾರ್ಯಾಚರಣೆ
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲೂಕುಗಳಲ್ಲಿ 24 ತಾಸುಗಳ ಕಾಲವೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳು ಸಜ್ಜುಗೊಂಡಿವೆ. ಬಿರುಸಿನ ಗಾಳಿ, ಮಳೆ ಮತ್ತು ಸಮುದ್ರದಲ್ಲಿ ಪ್ರಬಲ ಅಲೆಗಳು ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರಿಕೆ, ಪೊಲೀಸ್, ಕಂದಾಯ ಇಲಾಖೆಗಳ ಅಧಿಕಾರಿಗಳು ಕರಾವಳಿ ಪ್ರದೇಶಗಳಲ್ಲಿ ಅತ್ಯಂತ ಜಾಗರೂಕತೆ ವಹಿಸುತ್ತಿದ್ದಾರೆ. ಉಪ್ಪಳ ಮೂಸೋಡಿ ಕಡಪ್ಪುರಂ, ಕಾಪಿಲ್ ಬೀಚ್, ತೈಕಡಪ್ಪುರಂ ಸಹಿತ ಜಿಲ್ಲೆಯ ವಿವಿಧ ಸಮುದ್ರ ಕರಾವಳಿ ಪ್ರದೇಶಗಳಲ್ಲಿ ಹೆಚ್ಚುವರಿ ಜಾಗೃತಿ ಏರ್ಪಡಿಸಲಾಗಿದೆ.