ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿವೋರ್ಸ್ ಕೇಳಿದ ಹೆಂಡತಿ ಮೇಲಿನ ಸಿಟ್ಟಿನಿಂದಾಗಿ ಗಂಡನೊಬ್ಬ ಸಿಕ್ಕಾಪಟ್ಟೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಹೆಂಡತಿ ಹೆಸರಿನಲ್ಲಿದ್ದ ಸ್ಕೂಟಿಯನ್ನು ಅಡ್ಡಾದಿಡ್ಡಿ ಚಲಾಯಿಸಿ, ರೂಲ್ಸ್ ಬ್ರೇಕ್ ಮಾಡಿ ರಾಶಿ ರಾಶಿ ಫೈನ್ ಕಟ್ಟುವಂತೆ ಮಾಡಿದ್ದಾನೆ.
ಜಗಳವಾಡಿ ತಾಯಿ ಮನೆ ಸೇರಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ ಹೆಂಡ್ತಿಯ ವಿರುದ್ಧ ಸೇಡು ತೀರಿಸಲು ಆತ ಈ ರೀತಿ ಮಾಡಿದ್ದು, ಹೆಂಡ್ತಿ ಹೆಸರಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನವನ್ನು ಬೇಕು ಬೇಕಂತಲೇ ಅಡ್ಡಾದಿಡ್ಡಿ ಓಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮೂಲಕ ಆಕೆಯ ಕೈಯಿಂದಲೇ ಫೈನ್ ಕಟ್ಟುವಂತೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಇಲ್ಲಿನ ಮುಜಫರ್‌ಪುರದ ಮಹಿಳೆಯೊಬ್ಬರು ತಾನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡದಿದ್ದರೂ ಪದೇ ಪದೇ ಇ-ಚಲನ್ ಸ್ವೀಕರಿಸುತ್ತಿದ್ದರು. ನಂತರ ಇದೆಲ್ಲಾ ಗಂಡ ಕಿತಾಪತಿಯೆಂದು ತಿಳಿದು ಮಹಿಳೆ ಫುಲ್ ಶಾಕ್ ಆಗಿದ್ದಾರೆ. ಇತ್ತೀಚಿಗಷ್ಟೇ ಮದುವೆಯಾಗಿದ್ದ ಇವರಿಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದು, ಈ ಜಗಳ ಅತಿರೇಕಕ್ಕೆ ತಿರುಗಿ ಮಹಿಳೆ ಗಂಡನ ಮನೆ ಬಿಟ್ಟು ತಾಯಿ ಮನೆಗೆ ಹೋಗಿದ್ದಾರೆ. ಜೊತೆಗೆ ಡಿವೋರ್ಸ್‌ಗೂ ಕೂಡಾ ಅರ್ಜಿ ಸಲ್ಲಿಸಿದ್ದರು.
ಹೀಗೆ ಹೆಂಡ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಆ ಮಹಿಳೆಯ ಗಂಡ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಉದ್ದೇಶಪೂರ್ವಕವಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಅನೇಕ ಸಲ ಮಹಿಳೆ ತಾನೇ ಫೈನ್ ಕಟ್ಟಿದ್ದು, ನಂತರ ಗಂಡನ ಕಿತಾಪತಿ ತಾಳಲಾರದೆ ವಾಹನವನ್ನು ಹಿಂತಿರುಗಿಸುವಂತೆ ಗಂಡನ ಬಳಿ ಕೇಳಿಕೊಂಡಿದ್ದಾರೆ. ಡಿವೋರ್ಸ್ ಸಿಗುವವರೆಗೆ ಸ್ಕೂಟಿ ಹಿಂತಿರುಗಿಸುವುದಿಲ್ಲ ಎಂದು ಆತ ಹೇಳಿದ್ದು, ಬಳಿಕ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.