Sunday, August 14, 2022

Latest Posts

ನಾನು ಗಂಗೂಲಿ ಅವರ ಕಟ್ಟಾ ಅಭಿಮಾನಿ, ಅವರ ಶೈಲಿಯನ್ನೇ ಅನುಕರಿಸಲು ಬಯಸುತ್ತೇನೆ: ವೆಂಕಟೇಶ ಅಯ್ಯರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ ಅಯ್ಯರ್, ತಾವು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಶೈಲಿಯನ್ನೇ ಅನುಕರಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ.
ಯುಎಇನಲ್ಲಿ ಸಾಗುತ್ತಿರುವ ಐಪಿಎಲ್ ಎರಡನೇ ಹಂತದ ಮೊದಲ ಪಂದ್ಯದಲ್ಲೇ ಬೆಂಗಳೂರು ವಿರುದ್ಧ ಅಬ್ಬರಿಸಿದ್ದರು. ಬಳಿಕ ಬಲಿಷ್ಠ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲೂ ಕೇವಲ 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್ ನೆರವಿನಿಂದ 53 ರನ್ ಸಿಡಿಸಿದರು.
‘ಪ್ರಾಮಾಣಿಕವಾಗಿ ಹೇಳಬಯಸುತ್ತೇನೆಂದರೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪ್ರಥಮ ನಾಯಕ ಸೌರವ್ ಗಂಗೂಲಿ ಆಗಿದ್ದರಿಂದ ನಾನು ಮೊದಲು ಕೆಕೆಆರ್ ಫ್ರಾಂಚೈಸಿ ಪರ ಆಡಲು ಬಯಸಿದ್ದೆ. ಫ್ರಾಂಚೈಸಿ ಪರ ಆಯ್ಕೆಯಾಗಿರುವುದು ಕನಸು ನನಸಾದ ಕ್ಷಣವಾಗಿತ್ತು’ ಎಂದು ಹೇಳಿದ್ದಾರೆ.
‘ನಾನು ದಾದಾ ಅವರ ದೊಡ್ಡ ಅಭಿಮಾನಿ. ಅವರು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ನನ್ನ ಬ್ಯಾಟಿಂಗ್‌ನಲ್ಲಿ ಅವರು ದೊಡ್ಡ ಪ್ರಭಾವವನ್ನು ಬೀರಿದ್ದಾರೆ’ ಎಂದು ತಿಳಿಸಿದರು.
‘ಚಿಕ್ಕವನಿದ್ದಾಗ ನಾನು ಬಲಗೈಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ದಾದಾ ಹೇಗೆ ಸಿಕ್ಸರ್ ಹೊಡೆಯುತ್ತಾರೋ ಅದನ್ನು ನಿಖರವಾಗಿ ಅನುಕರಿಸಲು ಬಯಸಿದ್ದೆ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ದಾದಾ ನನ್ನ ಜೀವನದಲ್ಲಿ ಅರಿವಿಲ್ಲದೆ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ನಿಜವಾಗಿಯೂ ನಾನು ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅಲ್ಲದೆ ಅವಕಾಶ ಸಿಗಲಿದೆ ಎಂಬ ನಂಬಿಕೆಯಿತ್ತು’ ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss