ಹೊಸದಿಗಂತ ಡಿಜಿಟಲ್ ಡೆಸ್ಕ್;
ನನಗೆ ಈಗ 82 ವರ್ಷ, ಆದರೂ ಚಿಂತೆ ಇಲ್ಲ. ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಮನೆಗೆ ಕಳುಹಿಸುವುದು ನಿಶ್ಚಿತ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಮೈಸೂರಿನ ನಗರದಲ್ಲಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ನನ್ನನ್ನು ರಾಜಕೀಯದಿಂದ ನಿವೃತ್ತಿ ಆಗಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ನಾನು ಬದುಕಿರುವವರೆಗೂ ಸಕ್ರಿಯವಾಗಿರುತ್ತೇನೆ. ನಿಮ್ಮ ಆಡಳಿತದಿಂದ ಜನ ಬೇಸರ ಗೊಂಡಿದ್ದಾರೆ. ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿದರು.
ನಾನು ಕಲ್ಲುಬಂಡೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಏಯ್ ವಿಜಯೇಂದ್ರ ಅಂತ ಮಾತನಾಡುತ್ತೀರಾ? ಒಬ್ಬ ರಾಜ್ಯಾಧ್ಯಕ್ಷನಿಗೆ ಕೊಡುವ ಮರ್ಯಾದೆ ಇದೇನಾ? ನಿಮ್ಮ ಯೋಗ್ಯತೆಗೆ ಒಂದು ಅಭಿವೃದ್ಧಿ ಕೆಲಸ ತೋರಿಸಿ ಎಂದು ಸವಾಲು ಹಾಕಿದರು.
ಮುಡಾದಿಂದ 14 ನಿವೇಶನ ಹೇಗೆ ತೆಗೆದುಕೊಂಡಿದ್ದೀರಿ? ಪರಿಹಾರ ಕೊಟ್ಟರೆ ವಾಪಸು ಕೊಡುತ್ತೀನಿ ಎಂದು ಹೇಳುತ್ತಾರೆ. ಅದು ಹೇಗೆ ತಗೊಂಡಿದ್ದಿರಿ, ಯಾರಪ್ಪನ ದುಡ್ಡು ಪರಿಹಾರ ಕೊಡಕ್ಕೆ. ನಿಮ್ಮ ಮೈಯೆಲ್ಲಾ ಕಪ್ಪು ಚುಕ್ಕೆ ಇವೆ. ನಿಮ್ಮ ಪಾಪದ ಕೊಡ ತುಂಬಿದೆ, ತಾಕತ್ ಇದ್ದರೆ ವಿಧಾನ ಸಭೆ ವಿಸರ್ಜನೆ ಮಾಡಿ ಬನ್ನಿ. ಸೂರ್ಯಚಂದ್ರರಷ್ಟೇ ಸತ್ಯ ಮೈತ್ರಿ ಪಕ್ಷಗಳು 140-150 ಗೆಲ್ಲೋದು ನಿಶ್ಚಿತ ಎಂದು ಹೇಳಿದರು.
ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಐತಿಹಾಸಿಕ ಪಾದಯಾತ್ರೆ ನಡೆದಿದೆ, ನನಗೆ ಕೈಕಾಲು ಗಟ್ಟಿ ಇದೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡ್ತೀನಿ . ಮೋದಿ ಅವರನ್ನು ಪ್ರಪಂಚವೇ ಸ್ವೀಕರಿಸಿದೆ, ಅವರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ನೀವು ಅವರನ್ನು ಟೀಕೆ ಮಾಡ್ತೀರಾ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡ್ತೀರಾ? ಕರ್ನಾಟಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.