ಹೊಸ ದಿಗಂತ ವರದಿ, ರಾಮನಗರ:
ಕನ್ನಡಪರ ಹೋರಾಟಗಾರರಿಗೆ ನಟ ಕಿಚ್ಚ ಸುದೀಪ್ ಸಲಹೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ರಾಮನಗರ
ಜಿಲ್ಲೆ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದಾರೆ. ಬುರ್ಜ್ ಖಲೀಫಾದಲ್ಲಿ
ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಜೊತೆಗೆ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರಿಗೆ
ಕನ್ನಡಪರ ಹೋರಾಟಗಾರರು ಸನ್ಮಾನ ಮಾಡಿದರು.
ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕನ್ನಡಪರ ಹೋರಾಟಗಾರರಿಗೆ ಸುದೀಪ್
ಸಲಹೆ ನೀಡಿದರು. ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿ ಇರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದೆ ಎಂದರು. ನೀವು ಮೊದಲು ನಿಮ್ಮ ಗೊಂದಲ ಸರಿಪಡಿಸಿಕೊಳ್ಳಿ ಎಂದರು.
ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡೋದಾ, ಭಯ ಪಡೋದಾ ಗೊತ್ತಾಗಲ್ಲ ನನಗೆ, ಜೊತೆಗೆ ನನಗೆ ಉಗಿಯೋಕೆ ಬಂದಿದ್ದಾರಾ, ಹೊಗಳೋಕೆ ಬಂದಿದ್ದಾರಾ ಎಂದು ಗೊತ್ತಾಗಲ್ಲ. ಇನ್ನು ಕನ್ನಡ ಮಾತನಾಡಿದರೂ ಬೈತೀರಾ, ಮಾತನಾಡಿಲ್ಲ
ಅಂದ್ರೂ ಬೈತೀರಾ, ಆದರೆ ನಮಗೆ ಬೇರೆ ಭಾಷೆಗಳ ಮೇಲೂ ಅಭಿಮಾನ ಇರಬೇಕು. ಬೇರೆಯವರು ನಮ್ಮ ಭಾಷೆ ಮಾತನಾಡುವಾಗ ಗಲಾಟೆಯಾಗುತ್ತೆ, ಆಗ ನನಗೆ ಕನ್ಫ್ಯೂಜ್ ಆಗುತ್ತೆ, ಯಾಕೆ ಅಂತಾ ಎಂದು ಪ್ರಶ್ನಿಸಿದರು.
ಇನ್ನು ಸಂಘಟನೆಯವರ ಹಿಂದೆ ನೂರಾರು, ಸಾವಿರಾರು ಜನ ಬರ್ತೀರಾ. ಆದರೆ ಕಲಾವಿದರಿಗೆ ಅಭಿಮಾನಿಗಳಷ್ಟೇ ಇದ್ದಾರೆ.ಏ ಅವರು ರಾಜ್ಯದ ಮೂಲೆಗಳಲ್ಲಿ ಇರ್ತಾರೆ. ನೀವು ನಮ್ಮನ್ನು ಹೊಡೆಯಲು ಬಂದ್ರೆ ನಾವೊಬ್ಬರೆ ಸಿಕ್ತೀವಿ. ಹಾಗಾಗಿ ಕೆಲವರು ಏನಾದರೂ ಸ್ಟೆಪ್ ತಗೊಂಡಾಗ ಸ್ವಲ್ಪ ಯೋಚಿಸಿ ಎಂದು ಕನ್ನಡಪರ ಹೋರಾಟಗಾರರಿಗೆ ಕಿಚ್ಚ ಸುದೀಪ್ ಸಲಹೆ ನೀಡಿದರು. ಇನ್ನು ಕನ್ನಡವನ್ನು ಉಳಿಸಿ ಎಂದು ಹೇಳ್ತೀರಾ, ಅದು ತಪ್ಪು. ಯಾಕೆಂದರೆ ಕನ್ನಡವನ್ನ ಕಿತ್ತುಕೊಂಡವರು ಯಾರು, ಯಾರಿಗಿದೆ ಆ ಧೈರ್ಯ ಎಂದು ಕಿಚ್ಚ ಗುಡುಗಿದರು.
ಜೊತೆಗೆ ಕನ್ನಡಕ್ಕೆ ಇರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ , ಹಾಗಾಗಿ ಕನ್ನಡವನ್ನ ಕಿತ್ತುಕೊಳ್ಳುವ ತಾಕತ್ತು ಯಾವನಿಗಿದೆ ಬರೋಕೆ ಹೇಳಿ ಎಂದರು. ಆದರೆ ಇಲ್ಲಿ ಬೇರೆ ಭಾಷೆ ಜಾಸ್ತಿಯಾಗಿರೋದಕ್ಕೆ ಕಾರಣ ನೀವೇ ಯೋಚಿಸಿ, ಅರ್ಥ ಸಿಗಲಿದೆ. ಕನ್ನಡದ ಮೇಲೆ ಅಭಿಮಾನ ಇಲ್ಲ ಅಂದರೆ ಬಿಟ್ಟಾಕಿ ಅವರನ್ನ, ಅಭಿಮಾನ ಇರೋರನ್ನ ಗುರುತಿಸಿ ಬೆಳೆಸಿ, ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎಂದು ಹೇಳಿ ಎಂದು ನಟ ಕಿಚ್ಚ ಸುದೀಪ್ ಹೇಳಿಕೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವಿವಿಧ ಕನ್ನಡಪರ ಹೋರಾಟಗಾರರು ಸುದೀಪ್ ಗೆ ಸನ್ಮಾನ ಮಾಡಿ ಗೌರವಿಸಿದರು. ನೀವು ಸದಾ ಡಾ.ರಾಜಕುಮಾರ ರಂತೆ ಕನ್ನಡದ ಪರವಾಗಿ ಇರಬೇಕೆಂದು ಮನವಿ ಮಾಡಿದರು.