ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಖಲಿಸ್ತಾನಿ ಉಗ್ರ ಬಿಂದ್ರನ್ ವಾಲೆಯ ಫೋಟೋ ಇದ್ದ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಕ್ಕೆ ಭಾರತ ಕ್ರಿಕೆಟ್ ತಂಡದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬೇಷರತ್ ಕ್ಷಮೆ ಕೋರಿದ್ದಾರೆ.
1984 ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ನಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಹಾಕಿದ್ದ ಪೋಸ್ಟ್ ನಲ್ಲಿ ಖಲಿಸ್ತಾನಿ ಉಗ್ರ ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಅವರ ಫೋಟೋ ಇತ್ತು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಹರ್ಭಜನ್ ಸಿಂಗ್, ಆಪರೇಷನ್ ಬ್ಲೂ ಸ್ಟಾನ್ ನ 37 ನೇ ವಾರ್ಷಿಕ ದಿನದ ಅಂಗವಾಗಿ ವಾಟ್ಸ್ ಆಪ್ ಫಾರ್ಡ್ ಸಂದೇಶ ಬಂದಿದ್ದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದೆ. ಅದರಲ್ಲಿರುವ ವ್ಯಕ್ತಿ ಬಿಂದ್ರನ್ ವಾಲೆ ಎಂಬುದು ತಿಳಿದಿರಲಿಲ್ಲ. ಆತುರದಲ್ಲಿ, ಅದರಲ್ಲಿದ್ದ ಉದ್ದೇಶವನ್ನೂ ಅರಿಯುವ ಗೋಜಿಗೆ ಹೋಗದೇ ನಾನು ಇನ್ಸ್ಟಾಗ್ರಾಮ್ ಗೂ ಅಪ್ಲೋಡ್ ಮಾಡಿದೆ, ಇದಕ್ಕಾಗಿ ಬೇಷರತ್ ಕ್ಷಮೆ ಕೋರುತ್ತೇನೆ ಎಂದು ಟ್ವಿಟರ್ ನಲ್ಲಿ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದು ನನ್ನ ತಪ್ಪು, ಅದನ್ನು ಒಪ್ಪಿಕೊಳ್ಳುತ್ತೇನೆ, ಯಾವುದೇ ವೇದಿಕೆಯಲ್ಲಿಯೂ ಆ ಪೋಸ್ಟ್ ನಲ್ಲಿದ್ದ ಚಿಂತನೆಗಳನ್ನು ನಾನು ಒಪ್ಪುವುದಿಲ್ಲ. ನಾನು ಭಾರತಕ್ಕಾಗಿ ಹೋರಾಡುವ ಸಿಖ್ ಸಮುದಾಯದ ವ್ಯಕ್ತಿಯೇ ಹೊರತು, ಭಾರತದ ವಿರುದ್ಧ ಹೋರಾಡುವ ಸಿಖ್ ಅಲ್ಲ ಎಂದು ಹೇಳಿದ್ದಾರೆ.
ನನ್ನ ದೇಶಕ್ಕೆ ನೋವುಂಟು ಮಾಡಿದಕ್ಕೆ ನಾನು ಬೇಷರತ್ ಕ್ಷಮೆ ಕೋರುತ್ತಿದ್ದೇನೆ, ನನ್ನ ಜನರ ವಿರುದ್ಧ ಯಾವುದೇ ರಾಷ್ಟ್ರವಿರೋಧಿ ಗುಂಪುಗಳನ್ನೂ ನಾನು ಬೆಂಬಲಿಸಿಲ್ಲ, ಮುಂದೆ ಬೆಂಬಲಿಸುವುದೂ ಇಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ನನ್ನ ದೇಶಕ್ಕಾಗಿ 20 ವರ್ಷಗಳ ಕಾಲ ಬೆವರು, ರಕ್ತಗಳನ್ನು ನೀಡಿದ್ದೇನೆ, ಭಾರತ ವಿರೋಧಿಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.