ಹೊಸದಿಗಂತ ವರದಿ,ವಿಜಯಪುರ:
ನನಗೆ ನಿನ್ನೆ ದೆಹಲಿಯಿಂದ ಕಾಲ್ ಬಂದಿತ್ತು, ತಕ್ಷಣ ಹೊರಟು ಬಂದುಬಿಡಿ ಎಂದ ಕರೆ ಬಂದಿತ್ತು. ನಾನು ಬರುವುದಿಲ್ಲ ಎಂದು ಹೇಳಿದೆ, ನಮ್ಮದು ಟೀಮ್ ಇದೆ, ನಾನು ಒಬ್ಬನೇ ಬರಲು ಸಾಧ್ಯವಿಲ್ಲ ಎಂದಿರುವ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ದೆಹಲಿ ಬುಲಾವ್ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಹಾಗೂ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದೆಹಲಿಗೆ ಕರೆಯಿರಿ ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವೂದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ, ನಾನು ಒಂದು ಶಬ್ದಾನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದರು.
ಕಾಂಗ್ರೆಸ್ ಜೊತೆಗೆ ಯತ್ನಾಳ್ ಕೈಜೋಡಿಸಿದ್ದಾರೆ ಎಂದಿದ್ದ ಬಿ.ಸಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಜೊತೆಗೆ ಕೂಡುವಂತ ಹಲ್ಕಾ ಕೆಲಸ ನಾವು ಮಾಡಲ್ಲ. ರಾಜ್ಯಾಧ್ಯಕ್ಷ ಹೋಗಿ ಡಿ.ಕೆ. ಶಿವಕುಮಾರ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ, ಆ ವಿಡಿಯೋ ನನ್ನ ಬಳಿ ಇವೆ. ನಾವು ಕಾಂಗ್ರೆಸ್ ಜೊತೆಗೆ ಕೈ ಜೋಡಿಸೋ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡೋಲ್ಲ. ಹೆತ್ತತಾಯಿಗೆ ದ್ರೋಹ ಬಗೆಯೋಲ್ಲ ಎಂದು ಯಡಿಯೂರಪ್ಪ ದಾಟಿಯಲ್ಲಿ ಹೇಳಿದರು.
ಸದಾನಂದಗೌಡ ನನ್ನ ಮುಂದೆ ಬಿ.ಎಸ್. ಯಡಿಯೂರಪ್ಪ ಕುಟುಂಬದ ಬಗ್ಗೆ ಬಹಳ ಮಾತನಾಡಿದ್ದಾರೆ. ಅದನ್ನೆಲ್ಲ ಬಿಚ್ಚಿಟ್ಟರೆ ಅವರ ಬಣ್ಣ ಬಯಲಾಗುತ್ತೆ. ಸುಮ್ಮನೆ ಬಾಯಿ ಮುಚ್ಚಿಕೊಂಡಿರಲಿ, ಕೆಟ್ಟಕೆಟ್ಟದಾಗಿ ವಿಜಯೇಂದ್ರ, ಯಡಿಯೂರಪ್ಪ ಬಗ್ಗೆ ಮಾತನಾಡಿದ್ದಾರೆ ಎಂದು ದೂರಿದರು.
ಎರೆಹುಳ ನಾಗರಹಾವು ಆಗುತ್ತಿವೆ ಎಂದು ಸದಾನಂದಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಗರಹಾವು- ಎರೆಹುಳ ಎತ್ತನಿಂದೆತ್ತ ಸಂಬಂಧವಯ್ಯ ಸದಾನಂದ, ನೀನು ಮಾತನಾಡಿದ ಕೃತಿಗೂ ನಿನ್ನ ನಾಲಿಗೆಗು ಎತ್ತನ ಸಂಬಂಧವಯ್ಯ ಸದಾನಂದ, ಇದು ನನ್ನ ಹೊಸ ವಚನ ಎಂದು ಟಾಂಗ್ ನೀಡಿದರು.