ಹೊಸದಿಗಂತ ವರದಿ, ಬಳ್ಳಾರಿ:
ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿ ಎನ್ನುವ ಕೂಗು ಕೇಳಿ ಬರುತ್ತಿದೆ. ಸಚಿವ ಶ್ರೀರಾಮುಲು ಅವರು ಉಸ್ತುವಾರಿಯಾದರೆ ಅಡ್ಡಿಯಿಲ್ಲ, ಬೇರೆಯವರಿಗೆ ನೀಡಿದರೇ ಜಿಲ್ಲೆಯ ಮಾಹಿತಿ ಇರೋಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರ ವಿಚಾರದಲ್ಲಿ ಸೋಮಶೇಖರ ರೆಡ್ಡಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಸಚಿವರು, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸಚಿವ ಶ್ರೀರಾಮುಲು ಅವರು ಇರಬೇಕು ಎಂದು ಶಾಸಕ ಸೋಮಶೇಖರ್ ರೆಡ್ಡಿ ಅವರು ಹೇಳಿದ್ದಾರೆ.
ಆನಂದ ಸಿಂಗ್ ಬದಲು ಶ್ರೀರಾಮುಲುಗೆ ಉಸ್ತುವಾರಿ ನೀಡಿ ಎಂದಿದ್ದಾರೆ. ರೆಡ್ಡಿ ಅವರು ಪೂರ್ಣ ಮನಸ್ಸಿನಿಂದ ಸಚಿವ ಶ್ರೀರಾಮುಲು ಹೆಸರು ಹೇಳಿದರೆ ನಾನೇ ಬಿಟ್ಟು ಕೊಡುವೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಶ್ರೀ ರಾಮುಲು ಅವರು ಬಂದ್ರೆ ನಾನೇ ಸ್ವಾಗತ ಮಾಡುವೆ.
ಬಳ್ಳಾರಿ ಜಿಲ್ಲೆಗೆ ನಾನು ಅಥವಾ ಶ್ರೀರಾಮುಲು ಉಸ್ತುವಾರಿ ಇರಬೇಕು ಬೇರೆಯವರು ಬಂದರೆ ನಾನು ಒಪ್ಪೋಲ್ಲ.
ಯಾಕೆಂದರೆ ಜಿಲ್ಲೆಯ ಬಗ್ಗೆ ಬೇರೆಯವರಿಗೆ ಪೂರ್ಣ ಪ್ರಮಾಣದ ಮಾಹಿತಿ ಇರೋಲ್ಲ. ಬೇರೆಯವರಿಗೆ ಈ ಜಿಲ್ಲೆಯ ಉಸ್ತುವಾರಿ ಕೊಡುತ್ತೇನೆ ಎಂದು ಸಿ.ಎಂ ಹೇಳಿದರೆ. ನಾನೇ ಮುಂದುವರೆಯುವೆ ಎಂದು ಸಿ.ಎಂ. ಬಳಿ ಪಟ್ಟು ಹಿಡಿಯುವೆ ಎಂದರು.
ಸಚಿವರಿಗೆ ಮಾತ್ರ ಉಸ್ತುವಾರಿ: ಜಿಲ್ಲೆಯ ಉಸ್ತುವಾರಿಯನ್ನು ಸಚಿವರಿಗೆ ಮಾತ್ರ ಕೊಡಲಿದ್ದಾರೆ, ಸೋಮಶೇಖರ್ ರೆಡ್ಡಿ ಅವರು ಸಚಿವರಾಗಿಲ್ಲ. ಅವರನ್ನು ಮುಖ್ಯ ಮಂತ್ರಿಗಳು ಸಚಿವರನ್ನಾಗಿ ಮಾಡ್ತಾರೋ ಇಲ್ಲವೊ ಗೊತ್ತಿಲ್ಲ. ರೆಡ್ಡಿ ಅವರು ಸಚಿವರಾದರೇ ಅವರೇ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು. ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಕೆಲವರು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ನಾವೆಲ್ಲರು ಒಂದೇ ಎಂದು ನಗುಗುತ್ತಾ ತೆರಳಿದರು.