ಆ ಕ್ರೂರಿಗಳು ನಡುರಸ್ತೆಯಲ್ಲಿ ನನ್ನ ಪತಿಯನ್ನು ಕೊಲ್ಲುತ್ತಿದ್ದರೆ.. ಜನ ವಿಡಿಯೋ ತೆಗೆಯುವುದರಲ್ಲಿ ಮುಳುಗಿದ್ದರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾನು ಮತ್ತು ನನ್ನ ಪತಿ ರಾಜು ಸ್ಕೂಟಿಯಲ್ಲಿ ರಸ್ತೆ ದಾಟುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಸಿಗ್ನಲ್‌ ನಲ್ಲಿ ದಿಢೀರ್ ಅಡ್ಡಗಟ್ಟಿದರು.. ಅವರಲ್ಲೊಬ್ಬ ನನ್ನ ಸಹೋದರ ಸೈಯದ್ ಮೊಬಿನ್ ಅಹ್ಮದ್ ಹಾಗೂ ಮತ್ತೊಬ್ಬ ಆತನ ಸಹಚರ ಮೊಹಮ್ಮದ್ ಮಸೂದ್ ಅಹ್ಮದ್. ಅವರು ನನ್ನ ಪತಿಯನ್ನು ಸ್ಕೂಟಿಯಿಂದ ಹೊರಕ್ಕೆಳೆದು ನೆಲಕ್ಕೆ ತಳ್ಳಿ ತಲೆಗೆ ಕಬ್ಬಿಣದ ರಾಡ್ ನಿಂದ ಮನಬಂದಂತೆ ಥಳಿಸಿ, ಚಾಕುವಿನಿಂದ ಚಾಕುವಿನಿಂದ ತಿವಿದರು. ಆ ಕ್ರೂರಿಗಳು ನಡುರಸ್ತೆಯಲ್ಲೇ ನನ್ನ ಪತಿಯನ್ನು ಅಮಾನುಷವಾಗಿ ಕೊಲ್ಲುತ್ತಿದ್ದರೆ ಯಾರೊಬ್ಬರೂ ನಮ್ಮ ನೆರವಿಗೆ ಬರಲಿಲ್ಲ. ಬದಲಾಗಿ ಫೋಟೋ, ವಿಡಿಯೋ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಸಾವಿರಾರು ಜನರ ಮುಂದೆಯೇ ನನ್ನ ಪತಿಯನ್ನು ಕೊಲ್ಲುವಾಗ ಅವರು ನೋಡಲಿಲ್ಲವೇ? ಈ ಜಗತ್ತಿಗೆ ಕಣ್ಣಿಲ್ಲವೇ? ಪತಿಯನ್ನು ರಕ್ಷಿಸುವಂತೆ ಎಲ್ಲರ ಪಾದಗಳಿಗೂ ಬಿದ್ದೆ ಆದರೆ ಯಾರೊಬ್ಬರೂ ನನ್ನ ಪತಿಯ ಜೀವ ಉಳಿಸಲು ಮುಂದೆ ಬರಲಿಲ್ಲ.. ಇದು ಹೈದರಾಬಾದ್ ನಲ್ಲಿ ಮರ್ಯಾದಾಗೇಡು ಹತ್ಯೆಗೀಡಾದ ನಾಗರಾಜು ಪತ್ನಿ ಸೈಯ್ಯದ್‌ ಅಶ್ರಿನ್‌ ಸುಲ್ತಾನಾ ಜನರ ಮಾನವೀಯತೆ ಮರೆತ ನಡವಳಿಕೆಯ ಬಗ್ಗೆ ಆಡಿದ ಆಕ್ರೋಶಭರಿತ ನುಡಿಗಳಿವು.
ಟ್ರಾಫಿಕ್ ಸಿಗ್ನಲ್ ಬಳಿ ಸಾರ್ವಜನಿಕವಾಗಿವಾಗಿಯೇ ನನ್ನ ಪತಿಯ ಮೇಲೆ 15- 20 ನಿಮಿಷಗಳ ಕಾಲ ಬರ್ಬರವಾಗಿ ಹಲ್ಲೆ ನಡೆಸಿದರು. ಹಲ್ಲೆಯಿಂದ ರಾಜುವನ್ನು ಉಳಿಸಲು ನಾನು ಆತನ ಮೇಲೆ ಮಲಗಿದೆ. ಆಗ ಒಬ್ಬ ದಾಳಿಕೋರ ನನ್ನನ್ನು ಹಿಂದಕ್ಕೆ ಎಳೆದುಕೊಂಡ. ಇನ್ನೊಬ್ಬ ಅವನ ಮೇಲೆ ಹಲ್ಲೆ ಮಾಡುತ್ತಲೇ ಇದ್ದ. ರಾಜು ಹೆಲ್ಮೆಟ್ ಧರಿಸಿದ್ದರು. ಆದರೆ ಅವರು ಅವನ ತಲೆಯನ್ನೇ ಮುರಿದರು. ಒಂಟಿಯಾಗಿದ್ದ ನಮ್ಮ ನೆರವಿಗೆ ಯಾರೊಬ್ಬರೂ ಬರಲಿಲ್ಲ. ಎಲ್ಲರೂ ಸುಮ್ಮನೆ ನಿಂತು ನೋಡಿದರು. ಈ ಸಮಾಜದಲ್ಲಿ ಒಳ್ಳೆಯವರಿಲ್ಲ ಎಂದೆನಿಸಿತು ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸುಲ್ತಾನ ಕಣ್ಣೀರಿಟ್ಟರು.
ಪತಿ ಮೃತಪಟ್ಟಿದ್ದನ್ನು ಖಚಿತಪಡಿಕೊಂಡು ಸಹೋದರ ಮತ್ತವರ ಸಹಚರ ಶಸ್ತ್ರಾಸ್ತ್ರಗಳೊಂದಿಗೆ ಓಡಿಹೋದರು. ಪತಿಯನ್ನು ನನ್ನ ಕುಟುಂಬದವರೇ ಕೊಂದಿದನ್ನು ನೋಡಿ ದಿಗ್ಭ್ರಾಂತಿಯಾಗಿದೆ. ಅವರು ನನ್ನ ಪತಿಯನ್ನು ನನ್ನಿಂದ ಶಾಶ್ವತವಾಗಿ ಕಿತ್ತುಕೊಂಡರು ಎಂದು ಸುಲ್ತಾನ ನೋವು ತೋಡಿಕೊಂಡರು.
ಹೈದರಾಬಾದ್‌ನಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯನ್ನು ಮದುವೆಯಾದ ಕಾರಣಕ್ಕೆ ನಾಗರಾಜು ಎಂಬ ದಲಿತ ವ್ಯಕ್ತಿಯನ್ನು ಪತ್ನಿಯ ಸಂಬಂಧಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ನಾಗರಾಜು(25 ) ಸಿಕಂದರಾಬಾದ್‌ ನ ಮಡ್ರೆಡ್‌ ಪಲ್ಲಿ ನಿವಾಸಿಯಾಗಿದ್ದು, ಕಾರ್‌ ಶೋ ರೂಂ ಒಂದರಲ್ಲಿ ಸೆಲ್ಸ್‌ ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬಹಳಾ ಸಮಯದಿಂದ ಪ್ರೀತಿಸುತ್ತಿದ್ದ ನಾಗರಾಜು- ಸುಲ್ತಾನಾ ಆರ್ಯಮಂದಿರದಲ್ಲಿ ವಿವಾಹವಾಗಿದ್ದರು. ಈ ವಿವಾಹಕ್ಕೆ ಸುಲ್ತಾನ ಮನೆಯವರ ವಿರೋಧವಿತ್ತು. ಜನವರಿಯಲ್ಲಿ ಇಬ್ಬರು ವಿವಾಹವಾದಾಗಿನಿಂದ ಸುಲ್ತಾನ ಸಂಬಂಧಿಕರು ದಂಪತಿಯನ್ನು ಹುಡುಕುತ್ತಿದ್ದರು. ಬುಧವಾರ ಮಾರುತಿ ಶೋರೂಮ್‌ನಲ್ಲಿ ಅವರನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅವರು ದಂಪತಿಯನ್ನು ಮತ್ತೊಂದು ಬೈಕ್‌ ನಲ್ಲಿ ಹಿಂಬಾಲಿಸಿದರು. ಬಳಿಕ ಹೈದರಾಬಾದ್‌ನ ಸರೂರ್‌ನಗರದ ಜನನಿಬಿಡ ರಸ್ತೆಯಲ್ಲಿ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕೊಲೆಗಡುಕರನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!