Saturday, July 2, 2022

Latest Posts

ನಾನು ಯಾವಾಗಲೂ ರೈತರ ಪರ, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಸಚಿವ ಪ್ರಭು ಚವ್ಹಾಣ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಬೀದರ್:

ನಾನು ಯಾವಾಗಲೂ ರೈತರ ಪರವಾಗಿದ್ದು, ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಬದ್ಧನಾಗಿದ್ದೇನೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.
ಮಾಜಿ ಸಚಿವರಾದ ಮಾನ್ಯ ಈಶ್ವರ ಖಂಡ್ರೆಯವರು ಸರ್ಕಾರದ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ. ಇದು ಬೀದರ ಜಿಲ್ಲೆಯ ಸಮಸ್ಯೆ. ಸದ್ಯ ಈ ವಿಷಯ ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳ ಹಂತದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಜಿಲ್ಲೆಯ ಕಬ್ಬು ಬೆಳೆಗಾರರ ಹಣ ಪಾವತಿ ಕುರಿತಂತೆ ಕಳೆದ ವರ್ಷದ ಜನಪ್ರತಿನಿಧಿಗಳ ಸಭೆ ಹಾಗೂ ಈ ವರ್ಷ ಜನಪ್ರತಿನಿಧಿಗಳೊಂದಿಗೆ ನಡೆಸಿದ ಎರಡೂ ಸಭೆಗಳಿಗೆ ತಾವು ಗೈರು ಹಾಜರಾಗಿದ್ದೀರಿ. ರೈತರ ಬಗ್ಗೆ ತಮಗೆ ಅಷ್ಟೊಂದು ಕಾಳಜಿಯಿದ್ದರೆ ಈ ಸಭೆಗಳಿಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಬ್ಬು ಬೆಲೆ ನಿಗದಿಪಡಿಸಲು ಕರೆಯಲಾದ ಸಭೆಯಲ್ಲಿ ನಿಗದಿಪಡಿಸಿದ ಬೆಲೆ ಪಾವತಿಸುವುದು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಜವಾಬ್ದಾರಿಯಾಗಿದೆ. ಮಾನ್ಯ ಈಶ್ವರ ಖಂಡ್ರೆಯವರು ಮುತುವರ್ಜಿ ವಹಿಸಿ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆ ಮತ್ತು ಇತರ ಕಾರ್ಖಾನೆಗಳಿಂದ ರೈತರ ಖಾತೆಗೆ ಹಣ ಹಾಕುವಂತೆ ಒತ್ತಡ ಹೇರಬೇಕೆಂದು ಸಚಿವರು ಸಲಹೆ ಕೊಟ್ಟಿದ್ದಾರೆ.
ರೈತರ ಪರ ಕಾಳಜಿ ಇರುವ ಕಾರಣಕ್ಕಾಗಿಯೇ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇನೆ. ಸಭೆಯಲ್ಲಿ ನಿಗದಿಪಡಿಸಿದ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಪ್ಪಿಗೆಯೂ ನೀಡಿದ್ದರು. ಈ ಸಭೆಯಲ್ಲಿ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ನಾನು ಯಾವುದನ್ನು ಗುಪ್ತವಾಗಿ ಮಾಡಿಲ್ಲ. ಕಾರ್ಖಾನೆಗಳು ರೈತರಿಗೆ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ರೈತರ ಹಣ ಪಾವತಿಸುವಂತೆ ವೈಯಕ್ತಿಕವಾಗಿ ಕಾರ್ಖಾನೆಗಳ ಮುಖ್ಯಸ್ಥರಿಗೆ ಹಲವಾರು ಬಾರಿ ಮನವಿ ಮಾಡಿದ್ದೇನೆ. ಇಂದಿಗೂ ಪಟ್ಟು ಸಡಲಿಸದೇ ರೈತರಿಗೆ ಸಿಗಬೇಕಾದ ಮೊತ್ತ ಪಾವತಿಯಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಸಭೆಯಲ್ಲಿ ನಿಗದಿಪಡಿಸಿದ ಮೊತ್ತ ಪಾವತಿಸುತ್ತವೆ ಎಂಬ ನಂಬಿಕೆಯಿದೆ. ರೈತರು ಯಾವುದೇ ಕಾರಣಕ್ಕೂ ಅವಸರ ಪಡಬಾರದು. ನಾನು ಕಳೆದ ವರ್ಷ ರೈತರಿಗೆ ನ್ಯಾಯಯುತ ಬೆಲೆ ಕೊಡಿಸಿದ್ದೇನೆ. ಈ ವರ್ಷವೂ ಕೂಡ ಸಭೆಯಲ್ಲಿ ನಿರ್ಣಯಿಸಿದಂತೆ ರೈತರಿಗೆ ಹಣ ಸಿಗುವವರೆಗೆ ಸುಮ್ಮನಿರಲಾರೆ. ರೈತರು ಆತಂಕಕ್ಕೆ ಒಳಗಾಗಬಾರದು. ನಾನು ಯಾವಾಗಲೂ ನಿಮ್ಮೊಂದಿಗಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss