Wednesday, August 10, 2022

Latest Posts

ಮೇಯರ್ ಸ್ಥಾನ ಬಿಟ್ಟುಕೊಟ್ಟಿದಕ್ಕೆ ಪಕ್ಷದಿಂದ ನೋಟಿಸ್ ಬಂದರೆ ಉತ್ತರ ನೀಡುತ್ತೇನೆ: ಶಾಸಕ ತನ್ವೀರ್ ಸೇಠ್

ಹೊಸದಿಗಂತ ವರದಿ, ಮೈಸೂರು:

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕಾಂಗ ನಾಯಕ ಸಿದ್ದರಾಮಯ್ಯನವರ ಸೂಚನೆಯನ್ನು ಉಲ್ಲಂಘಿಸಿ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನನಗೆ ಇಲ್ಲಿಯ ತನಕ ಕೆಪಿಸಿಸಿಯಿಂದ ನೋಟಿಸ್ ಬಂದಿಲ್ಲ, ಬಂದರೆ ಅದಕ್ಕೆ ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.

ಶುಕ್ರವಾರ ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಸಂಬoಧಿಸಿದoತೆ ನಡೆದ ಎಲ್ಲ ರಾಜಕೀಯ ಬೆಳವಣಿಗೆಯನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆಯಂತೆ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನದು ಯಾವುದೇ ವೈಯಕ್ತಿಕ ವಿಚಾರವಿಲ್ಲ. ಪಕ್ಷದ ಹಿತ ಕಾಯುವ ನಿಟ್ಟಿನಲ್ಲಿ ನಾನು ನಿರ್ಧಾರ ಮಾಡಿದ್ದೇನೆ.

ಪಕ್ಷದ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕೂಡ ವೀಕ್ಷಕರಾಗಿದ್ರು. ಪಕ್ಷದ ವರಿಷ್ಠರು ಮೇಯರ್ ಗಿರಿ ನಮ್ಮದಾಗ ಬೇಕು ಅಂತ ಹೇಳಿದರು. ಆದರೆ ಕೊನೆಗಳಿಗೆಯಲ್ಲಿ ಆದ ಬದಲಾವಣೆಯಿಂದ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡಲು ನಿರ್ಧಾರ ಮಾಡಿದೆ ಎಂದರು.

ನಾವು ಅಧಿಕಾರದ ಹಿಂದೆ ಹೋಗಿಲ್ಲ. ನಾವು ಅಧಿಕಾರವನ್ನು ತ್ಯಾಗ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತ್ಯಾಗಕ್ಕೂ ಸಿದ್ದ. ನನ್ನ ಪಕ್ಷದ ವರ್ಚಸ್ ಬೆಳೆಸಲು ನಾನು ಬದ್ಧ. ಸಂವಿಧಾನದ ಉಳಿಸುವ ಕೆಲಸ ಮಾಡಿದ್ದೇವೆ. ನಗರದ ಬೆಳವಣಿಗೆ ಮಾರಕವಾದ ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟಿದ್ದೇವೆ. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕಿತ್ತು. ಆ ಕೆಲವನ್ನು ನಾನು ಮಾಡಿದ್ದೇನೆ ಎಂದು ತಿಳಿಸಿದರು.

ನಗರಪಾಲಿಕೆಯ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದಕ್ಕೆ ತಮಗೆ ನೋಟಿಸ್ ನೀಡುತ್ತಾರೆ ಎಂಬ ವಿಚಾರ ಕುರಿತು ಬೇಸರ ವ್ಯಕ್ತಪಡಿಸಿದರು.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಯಾರು ಮಾಡುತ್ತಾರೆ. ನಮ್ಮದು ತ್ಯಾಗದ ಪಕ್ಷ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಯಾರೋ ಕಿವಿ ಕಚ್ಚುವ ಕೆಲಸ ಮಾಡಿದ್ದಾರೆ. ಪಕ್ಷದಿಂದ ನೀಡುವ ನೋಟೀಸ್ ನಲ್ಲಿ ಏನು ಕೇಳುತ್ತಾರೋ ಅದಕ್ಕೆ ನಾನು ಉತ್ತರ ನೀಡಲು ಸಿದ್ಧ. ಪಕ್ಷದಲ್ಲಿ ಬಣ ರಾಜಕಾರಣ ಇದ್ದರೆ, ಕೆಲವರು ವೈಯಕ್ತಿಕ ಹಿತ ಕಾಪಾಡಿಕೊಳ್ಳುವ ಹಾಗೂ ಅವರ ಪ್ರತಿಷ್ಠೆಗೆ ನಾನು ಬಲಿಯಾಗಲು ಬಿಡಲ್ಲ. ನಾನು ಯಾರ ವಿರುದ್ಧವೂ ಮಾತನಾಡಲ್ಲ, ಯಾರು ನನಗೆ ಸಮಾಜಯಿಷಿ ಕೇಳುತ್ತಾರೊ ಅವರಿಗೆ ಉತ್ತರ ನೀಡುತ್ತೇನೆ. ಮೈಸೂರಿನ ನಾಗರೀಕರ ಹಿತದೃಷ್ಟಿಯಿಂದ ನಾನು ಕೊನೆ ಕ್ಷಣದಲ್ಲಿ ನಿರ್ಧಾರ ತೆಗೆದೆಕೊಂಡೆ. ಈ ಎಲ್ಲಾ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರ ಶಕ್ತಿ ಕುಂದಿಸುವ ವಿಚಾರವಾಗಿ ಪ್ರತಿಕ್ರಿಯಿಸಿ ಯಾರ ಶಕ್ತಿಯನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ. ಈ ಕುರಿತು ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ, ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದಕ್ಕೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss