ಪಾಕ್‌ ವಿರುದ್ಧ ವಿಶ್ವಕಪ್‌ನಲ್ಲಿ ಧೋನಿ ನೀಡಿದ ಆ ಸಲಹೆ ಪಂದ್ಯವನ್ನೇ ತಿರುಗಿಸಿತು.. ಆಸಕ್ತಿದಾಯಕ ವಿಚಾರ ಹಂಚಿಕೊಂಡ ಹರ್‌ಭಜನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್
2011ರ ಏಕದಿನ ವಿಶ್ವಕಪ್ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಘಟನೆ. ಆ ವರ್ಷ ತವರಿನಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಒರೋಬ್ಬರಿ 28 ವರ್ಷಗಳ ನಂತರ ಮತ್ತೆ ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿತು. ಈ ದಿಗ್ವಿಜಯವು ಟೀಂ ಇಂಡಿಯಾ ಕ್ಯಾಪ್ಟನ್ ಎಂಎಸ್ ಧೋನಿಯವರನ್ನು ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯನ್ನತ ನಾಯಕರ ಸ್ಥಾನದಲ್ಲಿ ನಿಲ್ಲಿಸಿತು. ಈ ಟೂರ್ನಿಯಲ್ಲಿ ಭಾರತವು ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಕಪ್ ಎತ್ತಿತು. ಆದರೆ ಅದಕ್ಕೂ ಮುನ್ನ ಮೊಹಾಲಿಯಲ್ಲಿ ಪಾಕಿಸ್ತಾನ ವಿರುದ್ಧದ ನಡೆದಿದ್ದ ಸೆಮಿಫೈನಲ್ ಪಂದ್ಯ ಸಾಕಷ್ಟು ರೋಚಕವಾಗಿತ್ತು. ಒಂದು ಹಂತದಲ್ಲಿ ಸೋಲಿನತ್ತ ಸಾಗುತ್ತಿದ್ದ ಭಾರತ ಅತ್ಯತ್ತವಾಗಿ ಕಂಬ್ಯಾಕ್‌ ಮಾಡಿ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ವಿಶ್ವಕಪ್‌ ಗೆಲುವಿನ ಹೀರೋಗಳಲ್ಲಿ ಒಬ್ಬರಾದ ಹರ್‌ಭಜನ್‌ ಸಿಂಗ್‌ ಈ ಪಂದ್ಯದ ರೋಚಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಬಜ್ಜಿ ಹೇಳುವ ಪ್ರಕಾರ ಕ್ಯಾಪ್ಟ್‌ ನ್‌ ಧೋನಿ ನೀಡಿದ ಆ ಒಂದು ಸಲಹೆ ಪಂದ್ಯದ ಗತಿಯನ್ನೇ ಬದಲಿಸಿತ್ತು.
ಇಂಡೋ – ಪಾಕ್‌ ಪಂದ್ಯ ಸಾಗುತ್ತಿದ್ದ ಪಂಜಾಬ್‌ ನ ಐಎಸ್ ಬಿಂದ್ರಾ ಅಂತರಾಷ್ಟ್ರೀಯ ಸ್ಟೇಡಿಯಂ ತುಂಬಿ ತುಳುಕುತ್ತಿತ್ತು. ಆ ಪಂದ್ಯವನ್ನು ವೀಕ್ಷಿಸಲು ಎರಡೂ ದೇಶಗಳ ಸೆಲೆಬ್ರಿಟಿಗಳು, ಚಲನಚಿತ್ರ ತಾರೆಯರು ಮತ್ತು ಭಾರತದ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಂತಹ ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ಪಂದ್ಯ ಸಾಗಿದಂತೆ ಪಂದ್ಯದ ತೀವ್ರತೆಯೂ ಜಾಸ್ತಿಯಾಗುತ್ತಿತ್ತು.
ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಆತ್ಮವಿಶ್ವಾಸದಲ್ಲಿದ್ದ ಭಾರತ ಟಾಸ್ ಗೆದ್ದ ಬಳಿಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಶ್ವಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ರ  115 ಎಸೆತಗಳಲ್ಲಿ 85 ರನ್‌ ಗಳ ಬಲದಿಂದ ಭಾರತವು ಪಾಕ್‌ ಗೆ 261 ರನ್‌ಗಳ ಸವಾಲಿನ ಗುರಿಯನ್ನು ನೀಡಿತು.
ಪ್ರತ್ಯುತ್ತರವಾಗಿ, ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನವು 25 ಓವರ್‌ಗಳಲ್ಲಿ 4 ವಿಕೆಟ್‌ಗೆ 106 ರನ್ ಗಳಿಸುವ ಮೂಲಕ ಸೋಲಿನತ್ತ ಮುಖ ಮಾಡಿತ್ತು. ಈ ಹಂತದಲ್ಲಿ ಜೊತೆಯಾದ ಮಿಸ್ಬಾ-ಉಲ್-ಹಕ್ ಅವರು ಉಮರ್ ಅಕ್ಮಲ್ ಜತೆಗಿನ ಪಾಲುದಾರಿಕೆಯಲ್ಲಿ ತಂಡವನ್ನು ಗೆಲುವಿನ ಸಮೀಪ ಕರೆತರುತ್ತಿದ್ದರು. ಈ ಜೊತೆಯಾಟ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಸಿಕ್ಸರ್ ಗಳ ಮೇಲೆ ಸಿಕ್ಸರ್‌  ಸಿಡಿಸಿ ಗೆಲುವಿನ ಅಂತರವನ್ನು ಕಡಿಮೆಗೊಳಿಸಿದರು. ಪಾಕಿಸ್ತಾನದ ಜೋಡಿಯು ಸೆಟ್ ಆಗಿ ಕಾಣಿಸಿಕೊಂಡಾಗ ಭಾರತದ ಪಾಳೆಯದಲ್ಲಿ ಆತಂಕದ ಕಾರ್ಮೋಡ ಕವಿಯುತ್ತಿತ್ತು. ಆ ಸಂದರ್ಭದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮಾಸ್ಟರ್ ಪ್ಲಾನ್‌ನೊಂದಿಗೆ ನನ್ನ  ಬಳಿಗೆ ಬಂದರು ಎಂದು ಬಜ್ಜಿ ನೆನಪಿಸಿಕೊಂಡಿದ್ದಾರೆ.
“ನಾನು ಕ್ರಿಕೆಟ್‌ ಅಂಗಳದಲ್ಲಿ ನಿಷ್ಕ್ರಿಯನಾಗುತ್ತಿದ್ದೇನೆ ಎಂದು ನಾನು ಭಾವಿಸಿದ ಪಂದ್ಯಗಳಲ್ಲಿ ಇದೂ ಒಂದು. ಅದಾಗಲೇ ನಾನು ಐದು ಓವರ್‌ಗಳನ್ನು ಬೌಲ್ ಮಾಡಿದ್ದೆ. ಆ ವೇಳೆಗೆ ಸುಮಾರು 26-27 ರನ್‌ಗಳನ್ನು ಬಿಟ್ಟುಕೊಟ್ಟಿದ್ದೆ. ಆಗ ಪಾನಿಯ ವಿರಾಮವಾಗಿತ್ತು. ನನ್ನ ಬಳಿಗೆ ಬಂದ ಧೋನಿ, ‘ಭಜ್ಜು ಪಾ, ರೌಂಡ್‌ ದಿ ವಿಕೆಟ್ ಬಂದು ಬೌಲ್‌ ಮಾಡು ಎಂದು ಹೇಳಿದರು. ಅವರು ಚೆನ್ನಾಗಿ ಆಡುತ್ತಿದ್ದಾರೆ. ಈ ಜೊತೆಯಾಟವು ಅಪಾಯಕಾರಿಯಾಗುತ್ತಿದೆ. ನೀನು ಇದನ್ನು ಮುರಿಯಬೇಕು. ಉಮರ್‌ ಗೆ ಮುಂದಿನ ಎಸೆತವನ್ನು ವಿಕೆಟ್‌ ಬಳಸಿಬಂದು ಬೌಲ್‌ ಮಾಡು ಎಂದರು.
ʼಮುಂದಿನ ಎಸೆತ ಬೌಲ್ ಮಾಡುವುದಕ್ಕಿಂತ ಮುನ್ನ ನಾನು ದೇವರನ್ನು ನೆನಪಿಸಿಕೊಂಡೆ. ಗೆಲುವಿಗಾಗಿ ಪ್ರಾರ್ಥಿಸಿದೆ. ದೇವರು ನನ್ನ ಮಾತನ್ನು ಕೇಳಿದನು ಎಂದು ಕಾಣಿಸುತ್ತದೆ. ಆ ಬಳಿಕ ನಾನು ಧೋನಿ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದೆ ಸಾಗಿದೆ. ರೌಂಡ್‌ ದಿ ವಿಕೆಟ್‌ ಬಂದು ನಾನು ಎಸೆದ ಮೊದಲ ಎಸೆತವೇ ಉಮರ್ ಅಕ್ಮಲ್ ರನ್ನು ವಂಚಿಸಿತು. ಬಾಲ್‌ ವಿಕೆಟ್‌ ಅನ್ನು ಉರುಳಿಸುತ್ತಿದ್ದಂತೆ ಮೈದಾನದ ತುಂಬೆಲ್ಲಾ ಹರ್ಷೋದ್ಘಾರ ಕೇಳಿಬಂತು. ಆ ವೇಳೆ ರೋಮಾಂಚನವೆನಿಸಿತು ಎಂದು ಭಾರತದ ಮಾಜಿ ಆಫ್ ಸ್ಪಿನ್ನರ್  ಹರ್ಭಜನ್ ಸ್ಟಾರ್ ಸ್ಪೋರ್ಟ್ಸ್‌ನ ಶೋ ‘ದಿಲ್ ಸೇ ಇಂಡಿಯಾ’ದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಉಮರ್ ಅಕ್ಮಲ್ ಪತನದ ನಂತರ ಪಾಕಿಸ್ತಾನ ಬ್ಯಾಟಿಂಗ್ ಚದುರಿಹೋಯಿತು. ಮಿಸ್ಬಾ 76 ಎಸೆತಗಳಲ್ಲಿ 56 ರನ್ ಗಳಿಸಿ ಟಾಪ್ ಸ್ಕೋರ್ ಮಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪಾಕ್‌  231 ರನ್‌ಗಳಿಗೆ ಸರ್ವಪತನಗೊಂಡಿತು. ಭಾರತವು 29 ರನ್‌ಗಳಿಂದ ಪಂದ್ಯವನ್ನು ಗೆದ್ದು ಫೈನಲ್‌ಗೆ ತಲುಪಿತು. ಆ ಮುಂದಿನದೆಲ್ಲಾ ಈಗ ಇತಿಹಾಸ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!