ಹೊಸದಿಗಂತ ವರದಿ, ದಾವಣಗೆರೆ:
ಈಗಿನ ಸಂದರ್ಭದಲ್ಲಿ ನಾವು ಮೌನವಾಗಿದ್ದು, ಯಾವುದನ್ನೂ ಮಾತನಾಡುವುದಿಲ್ಲ ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶಿವಯೋಗ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲವನ್ನೂ ವಕೀಲರು ನಿಮಗೆ ಹೇಳಿರುತ್ತಾರೆ. ನ್ಯಾಯಾಲಯದ ಆದೇಶದಂತೆ ಜಾಮೀನು ಸಿಕ್ಕಿದೆ. ಹಾಗಾಗಿ ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ವಿಚಾರಣೆ ನಡೆಯುತ್ತಿದೆ. ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ವಕೀಲರು ಸಹ ಹೆಚ್ಚು ಮಾತನಾಡದಂತೆ ಸೂಚನೆ ನೀಡಿದ್ದಾರೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದರು.
ಎಲ್ಲರಿಗೂ ಒಳ್ಳೆಯದು ಮಾಡಿ. ಮಾಧ್ಯಮದವರ ಸಹಕಾರ ಇರಲಿ. ಒಳಿತಾಗಲಿ ಎಂದಷ್ಟೇ ನನ್ನ ಹಾರೈಕೆಯಾಗಿದೆ ಎಂದ ಶರಣರು, ಬೇರೆ ಯಾವುದೇ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಲಿಲ್ಲ. ನಿಮ್ಮ ವಿರುದ್ಧ ಷಡ್ಯಂತ್ರ ನಡೆದಿದೆಯೇ ಎಂಬ ಪ್ರಶ್ನೆಗೂ ಉತ್ತರಿಸಲು ಮುರುಘಾ ಶರಣರು ನಿರಾಕರಿಸಿದರು. ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆಯೆಂಬ ಸಮಾಧಾನ ಮುಖದಲ್ಲಿ ವ್ಯಕ್ತವಾದರೂ, ಮನಸ್ಸಿನಲ್ಲಿ ನೋವು ಹೆಪ್ಪುಗಟ್ಟಿದಂತೆ ಮುರುಘಾ ಶರಣರು ಕಂಡು ಬಂದರು. ಭಕ್ತರಿಗೆ ಸಂದೇಶ ನೀಡಿ ಎಂದಾಗಲೂ ಶರಣರು ಸ್ಪಂದಿಸಲಿಲ್ಲ.