ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಶಿವಮೊಗ್ಗ:
ರಾಜಕಾರಣದಲ್ಲಿ ಗೂಟ ಹೊಡೆದು ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಮಂತ್ರಿ ಸ್ಥಾನ ಹೋದರೆ ಗೂಟ ಗೋಯಿತೆಂದು ಭಾವಿಸುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿಡಿಯೋ ವೈರಲ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಇಂಧನ ಸಚಿವನಾಗಿದ್ದಾಗ ಪಕ್ಷದ ರಾಜ್ಯಾಧ್ಯಕ್ಷನಾಗಬೇಕೆಂದು ಹಾಗೂ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷನಾಗಿದ್ದಾಗ ದೇವೇಗೌಡರ ವಿರುದ್ಧ ಕನಕಪುರದಲ್ಲಿ ಚುನಾವಣೆಗೆ ನಿಲ್ಲುವಂತೆ ಪಕ್ಷ ಸೂಚಿಸಿತ್ತು. ಅದರಂತೆ ನಡೆದುಕೊಂಡಿದ್ದೆ. ಈಗಲೂ ಪಕ್ಷ ಏನು ಹೇಳುತ್ತೋ ಅದನ್ನೇ ಮಾಡುತ್ತೇನೆ ಎಂದರು.
ಈಗಲೂ ಮಂತ್ರಿ ಸ್ಥಾನವನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಜೀವ ಇರೋವರೆಗೆ ಹಿಂದೂ ಸಮಾಜ ಹಾಗೂ ಬಿಜೆಪಿಗಾಗಿ ಕೆಲಸ ಮಾಡುವುದಾಗಿ ಹೇಳಿದ ಅವರು, ಪಕ್ಷ ಯುವಕರಿಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ನೀವು ಬೇರೆ ಜವಾಬ್ದಾರಿ ವಹಿಸಿಕೊಳ್ಳಿ ಎಂದರೆ ಅದನ್ನು ಮಾಡುತ್ತೇನೆ ಎಂದರು.
ಬಿಜೆಪಿ ರಾಜ್ಯಾಕ್ಷ ನಳೀನ್ ಕುಮಾರ್ ಕಟೀಲು ವೀಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವೀಡಿಯೋ ವೈರಲ್ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಯಬೇಕು. ರಾಜ್ಯಾಧ್ಯಕ್ಷರು ಈ ವಿಡಿಯೋ ತಮ್ಮದಲ್ಲ ಎಂದು ಹೇಳಿದ್ದಾರೆ. ನೂರಕ್ಕೆ ನೂರು ನಂಬಿಕೆ ಇದೆ ಇದು ನಳೀನ್ ಕುಮಾರ್ ಅವರದ್ದಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ನಳೀನ್ ಕುಮಾರ್ ಧ್ವನಿ ಅನುಕರಣೆ ಮಾಡಲಾಗಿದೆ. ಇದರಲ್ಲಿ ಅವರು ಬಲಿಪಶು ಆಗಬಾರದು. ಇದರಿಂದಾಗಿ ವೈರಲ್ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಿಎಂ ಯಡಿಯೂರಪ್ಪನವರು ದೆಹಲಿಗೆ ಹೋದಾಗ ಅವರೊಂದಿಗೆ ಆರು ಬ್ಯಾಗ್ ಹೋಗಿವೆ ಅವುಗಳಲ್ಲಿ ಏನಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ. ಬ್ಯಾಗ್ ಗಳಲ್ಲಿ ಏನು ತೆಗೆದುಕೊಂಡು ಹೋಗಲು ಸಾಧ್ಯ ಎಂಬುದು ಗೊತ್ತಿದ್ದರೂ ಕೀಳು ಮಟ್ಟದ ಹೇಳಿಕೆ ಕುಮಾರಸ್ವಾಮಿ ನೀಡಿದ್ದಾರೆ. ಇದಕ್ಕಾಗಿ ಅವರು ರಾಜ್ಯದ ಜನತೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನು ಭೇಟಿಯಾಗಲು ಬರುವ ಮುಖಂಡರು ಬ್ಯಾಗ್ ತರುತ್ತಿದ್ದರು. ಹಾಗಂತ ಆ ಬ್ಯಾಗ್ ನಲ್ಲಿ ಏನು ಬಂದಿತ್ತು ಎಂದು ಪ್ರಶ್ನಿಸಬಹುದೇ ? ರಾಜ್ಯದಿಂದ ಆಯ್ಕೆಯಾದ ಸಚಿವರಿಗೆ ಸನ್ಮಾನ ಮಾಡಲು ಹಾರ, ಸ್ಮರಣಿಕೆಗಳನ್ನು ತೆಗೆದುಕೊಂಡು ಹೋದರೆ ಅದನ್ನು ಅನುಮಾನಿಸಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದರು.