ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಚಿನ್ನ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಜೊತೆ ಕೆಲ ಸಚಿವರ ಹೆಸರು ಕೇಳಿಬರುತ್ತಿದ್ದು, ಇದೀಗ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಟಿ ರನ್ಯಾ ಜೊತೆಗೆ ಸಂಪರ್ಕದಲ್ಲಿದ್ದ ಇಬ್ಬರು ಸಚಿವರ ಹೆಸರನ್ನು ನಾಳೆ ಸದನದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣ ಕುರಿತು ಸೋಮವಾರ ಸದನದಲ್ಲಿ ಮಾತನಾಡುವೆ. ಆಕೆಯೊಂದಿಗೆ ಸಂಪರ್ಕವಿರುವ ಇಬ್ಬರು ಸಚಿವರ ಹೆಸರನ್ನು ಸದನದಲ್ಲಿ ಹೇಳುವೆ. ಈಗ ಆ ಬಗ್ಗೆ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಇದು ಸದನದ ರಹಸ್ಯ ಎಂದರು.
ಆಕೆಗೆ ಪ್ರೊಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನ ಎಲ್ಲಿಂದ ತಂದಿದ್ದಾರೆ? ಎಲ್ಲಿಟ್ಟು ತಂದಿದ್ದಾರೆ ಎಂಬುದು ಗೊತ್ತಿದೆ ಎಂದು ಯತ್ನಾಳ್ ಹೇಳಿದರು.
ರನ್ಯಾ ಪ್ರಕರಣದಲ್ಲಿ ಕೇಂದ್ರದ ಕಸ್ಟಮ್ಸ್ ಆಧಿಕಾರಿಗಳೂ ತಪ್ಪು ಮಾಡಿದ್ದಾರೆಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಯಾರು ತಪ್ಪು ಮಾಡಿದ್ದರೂ ಅದು ತಪ್ಪೇ. ಕಸ್ಟಮ್ಸ್ ಆಧಿಕಾರಿಗಳು ತಪ್ಪು ಮಾಡಿದ್ದರೆ ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪೇ ಎಂದರು.