ಹೊಸದಿಗಂತ ಆನ್ ಲೈನ್ ಡೆಸ್ಕ್:
ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿವ ಮೂಲಕ ಒಮನ್ ಶುಭಾರಂಭ ಮಾಡಿಕೊಂಡಿದೆ.
ತವರಿನ ಮೈದಾನದ ಸಂಪೂರ್ಣ ಪ್ರಯೋಜನ ಪಡೆದ ಒಮನ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಅರ್ಹ ಗೆಲುವು ದಾಖಲಿಸಿತು.
‘ಬಿ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಒಮನ್ ನಾಯಕ ಜೀಶನ್ ಮಕ್ಸೂದ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಪಪುವಾ ನ್ಯೂಗಿನಿ, ನಾಯಕ ಅಸ್ಸಾದ್ ವಾಲಾ ಆಕರ್ಷಕ ಅರ್ಧಶತಕದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಸಮರ್ಥವಾಯಿತು.
ಗುರಿ ಬೆನ್ನತ್ತಿದ ಒಮನ್, ಆರಂಭಿಕರಾದ ಜತೀಂದರ್ ಸಿಂಗ್ ಹಾಗೂ ಅಕಿಬ್ ಇಲ್ಯಾಸ್ ಅಜೇಯ ಅರ್ಧಶತಕಗಳ ನೆರವಿನಿಂದ 13.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
42 ಎಸೆತಗಳನ್ನು ಎದುರಿಸಿದ ಜತೀಂದರ್ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿ ಔಟಾಗದೆ ಉಳಿದರು. ಅಲ್ಲದೆ ಕೇವಲ 33 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅತ್ತ ಅಕಿಬ್ 43 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದರು.