ಬಿಸಿ ಬಿಸಿ ಇಡ್ಲಿ, ಚಟ್ನಿ ನಿಮಿಷದಲ್ಲಿ ಸಿಗಲಿದೆ ನಮ್ಮ ಬೆಂಗಳೂರಿನಲ್ಲಿ: ಇಡ್ಲಿ ʻಎಟಿಎಂʼ ಮೆಷಿನ್‌ ನಿಮಗಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಟಿಎಂ ಅಂದರೆ, ʻಯಾವುದೇ ಸಮಯದಲ್ಲಾದರೂ ಹಣ ನೀಡುವ ಮಿಷನ್ʼ ಎಂಬುದು ನಮಗೆ ಗೊತ್ತು. ಆದರೆ ʻಇಡ್ಲಿ ಎಟಿಎಂʼ ಬಗ್ಗೆ ನಿಮಗೆ ಗೊತ್ತಾ? 24X7 ಇಡ್ಲಿ ಎಟಿಎಂ ಯಾವುದೇ ಸಮಯದಲ್ಲಾದರೂ ನಿಮಗೆ ಬಿಸಿ ಇಡ್ಲಿಗಳನ್ನು ನೀಡುತ್ತದೆ. ರುಚಿಕರವಾದ ಚಟ್ನಿ, ಮಸಾಲೆಯುಕ್ತ ಕರ್ರಿ ಪುಡಿ ಜೊತೆಗೆ ಬಿಸಿ ಬಿಸಿ ಇಡ್ಲಿ ಸಿಗುತ್ತದೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸ್ಟಾರ್ಟ್ ಅಪ್ ಕಂಪನಿಯೊಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ಇಡ್ಲಿ ಎಟಿಎಂ’ಗಳನ್ನು ಸ್ಥಾಪಿಸಿದೆ. ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಸ್ಥಾಪಿಸಿದ ಬೆಂಗಳೂರು ಮೂಲದ ಸ್ಟಾರ್ಟಪ್ ಫ್ರೆಶಪ್ ರೊಬೊಟಿಕ್ಸ್ ತ್ವರಿತ ಇಡ್ಲಿ ತಯಾರಕವನ್ನು ಅಭಿವೃದ್ಧಿಪಡಿಸಿದೆ. ಇಪ್ಪತ್ತನಾಲ್ಕು ಗಂಟೆಗಳ ಕಾಲ ಬಿಸಿ ಬಿಸಿ ಇಡ್ಲಿಗಳನ್ನು ನೀಡುವ ಈ ಎಟಿಎಂ ಕೇವಲ 12 ನಿಮಿಷಗಳಲ್ಲಿ 72 ಇಡ್ಲಿಗಳನ್ನು ತಯಾರಿಸುತ್ತದೆ.

ಈ ಎಟಿಎಂ ಮೂಲಕ ಬಿಸಿ ಇಡ್ಲಿಗಳನ್ನು ಪಡೆಯುವುದು ತುಂಬಾ ಸುಲಭ. ಮೊಬೈಲ್ ಫೋನ್‌ನೊಂದಿಗೆ ಎಟಿಎಂನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಫೋನ್‌ನಲ್ಲಿ ಮೆನುವನ್ನು ತೋರಿಸುತ್ತದೆ. ನಿಮಗೆ ಇಷ್ಟವಾದ ಇಡ್ಲಿಯನ್ನು ಆರ್ಡರ್‌ ಮಾಡಿ, ಆನ್ಲೈನ್‌ಲ್ಲಿ ಹಣ ಪಾವತಿಸಿದರೆ ಕೆಲವೇ ಸೆಕೆಂಡ್‌ಗಳಲ್ಲಿ ಬಿಸಿಯಾದ ಇಡ್ಲಿ, ಚಟ್ನಿ ನಿಮ್ಮ ಕೈಯಲ್ಲಿರುತ್ತದೆ.

ಶರಣ್ ಹಿರೇಮಠ್‌ಗೆ ಇಡ್ಲಿ ಎಟಿಎಂ ಕಲ್ಪನೆ ಹೇಗೆ ಬಂತು?

2016ರಲ್ಲಿ ತಮ್ಮ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಧ್ಯರಾತ್ರಿ ಬಿಸಿ ಬಿಸಿ ಇಡ್ಲಿ ಸಿಗದೇ ತೊಂದರೆ ಅನುಭವಿಸಿದ್ದರಂತೆ, ಆಗ ಹುಟ್ಟಿಕೊಂಡಿದ್ದೇ ದಿನದ 24 ಗಂಟೆಯೂ ತಾಜಾ ಇಡ್ಲಿಗಳನ್ನು ತಯಾರಿಸುವ ATM ಯಂತ್ರವನ್ನು ರಚಿಸುವ ಆಲೋಚನೆ. ಆ ಐಡಿಯಾದಿಂದಲೇ ಈ ಇಡ್ಲಿ ಎಟಿಎಂ ಬಂದಿದೆ ಎನ್ನುತ್ತಾರೆ.

ದಕ್ಷಿಣ ಭಾರತದಲ್ಲಿ ಟಿಫಿನ್‌ಗಾಗಿ ಇದು ಮೊದಲ ಸ್ವಯಂಚಾಲಿತ ಅಡುಗೆ ಮತ್ತು ವಿತರಣಾ ಮಿಷನ್ ಎಂದು ಶರಣ್ ಹಿರೇಮಠ್ ಹೇಳಿದರು. ಸದ್ಯ ಬೆಂಗಳೂರಿನಲ್ಲಿ ಎರಡು ಕಡೆ ಇಡ್ಲಿ ಎಟಿಎಂ ಸ್ಥಾಪನೆಯಾಗಿದೆ. ಇನ್ನೂ ವಿಸ್ತರಿಸುವ ಯೋಚನೆ ಇದೆ. ಇಡ್ಲಿ ಜೊತೆಗೆ ದೋಸೆ, ಅನ್ನ, ಸಾಂಬಾರ್ ಜ್ಯೂಸ್‌ ಸಿಗುವ ಎಟಿಎಂ ತಯಾರು ಮಾಡುವ ಯೋಚನೆ ಇದೆಯಂತೆ. ಶೀಘ್ರದಲ್ಲಿ ಅದೂ ಬರಲಿದೆ ಎಂದಿದ್ದಾರೆ ಶರಣ್.‌ ಈ ಇಡ್ಲಿ ಎಟಿಎಂಗಳನ್ನು ಕಚೇರಿಗಳು, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಸ್ಥಾಪಿಸುವ ಯೋಚನೆಯಿದ್ದು, ಆದಷ್ಟು ಬೇಗ ಆ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!