ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ನಮ್ಮ ಮಕ್ಕಳು ಮುಂಜಾನೆ 7 ಗಂಟೆಗೇ ಶಾಲೆಗೆ ಹೋಗಬಹುದಾದರೆ ನಾವು 9 ಗಂಟೆಗೆ ನ್ಯಾಯಾಲಯ ಪ್ರಾರಂಭಿಸಬಹುದು” ಎಂದು ಸುಪ್ರಿಂ ಕೋರ್ಟ್‌ ನ ಹಿರಿಯ ನ್ಯಾಯಾಧೀಶರೊಬ್ಬರು ಹೇಳಿದ್ದಾರೆ.

ಕೋರ್ಟ್‌ ಸಾಮಾನ್ಯವಾಗಿ ಪ್ರಾರಂಭವಾಗುವ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪ್ರಕರಣಗಳ ವಿಚಾರಣೆ ಪ್ರಾರಂಭಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಉದಯ್ ಲಲಿತ್ ಅವರು ಹೀಗೆ ಹೇಳಿದ್ದಾರೆ. ಶುಕ್ರವಾರ ಬೆಳಿಗ್ಗೆ 9:30ಕ್ಕೆ ನ್ಯಾಯಾಲಯ ಪ್ರಾರಂಭಿಸಿದ ಅವರು ವಕೀಲ ಮುಕುಲ್ ರೋಹ್ಟಗಿ ಅವರಿಗೆ, “ನಮ್ಮ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರಾದ ನಾವು ಬೆಳಿಗ್ಗೆ 9 ರಿಂದ ಏಕೆ ಕೆಲಸ ಮಾಡಬಾರದು” ಎಂದು ಹೇಳಿದರು.

ಎನ್‌ವಿ ರಮಣ ಅವರು ಆಗಸ್ಟ್ 26 ರಂದು ನಿವೃತ್ತರಾದ ನಂತರ ನ್ಯಾಯಮೂರ್ತಿ ಲಲಿತ್ ಅವರು ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

“ನಾನು ಯಾವಾಗಲೂ ಬೆಳಿಗ್ಗೆ 9 ಗಂಟೆಗೆ ಕೆಲಸವನ್ನು ಪ್ರಾರಂಭಿಸುತ್ತೇನೆ, 11 ಗಂಟೆಗೆ ವಿರಾಮ ಹೊಂದಿದ್ದೇನೆ, ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಮತ್ತು ನಂತರ ಮರುದಿನಕ್ಕೆ ತಯಾರಿ ನಡೆಸುತ್ತೇನೆ” ಎಂದು ನ್ಯಾಯಮೂರ್ತಿ ಉದಯ್‌ ಲಲಿತ್‌ ಹೇಳಿದ್ದಾರೆ. ಅವರ ಮಾತಿಗೆ ವಕೀಲ ರೋಹ್ಟಗಿ ಅವರು ಇದು ದೀರ್ಘಾವಧಿಯಲ್ಲಿ ಅನುಸರಿಸಬಹುದಾದ ಉತ್ತಮ ಹೆಜ್ಜೆಯಾಗಿದೆ. ರಾಜಸ್ಥಾನ ಹೈಕೋರ್ಟ್‌ ಈಗಾಗಲೇ ಇದನ್ನು ಅನುಸರಿಸುತ್ತಿದೆ ಎಂದು ಸಹಮತ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು “ಇದು ಚಿಕ್ಕ ಕ್ಯಾಪ್ಸೂಲ್‌ ಅಷ್ಟೇ, ಭವಿಷ್ಯದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸೋಣ” ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಸಾಮಾನ್ಯವಾಗಿ 10:30 ಕ್ಕೆ ವಿಚಾರಣೆಗಳು ಪ್ರಾರಂಭವಾಗುತ್ತವೆ. ನಂತರ ನ್ಯಾಯಾಧೀಶರು ಮಧ್ಯಾಹ್ನ 1 ಗಂಟೆಗೆ ವಿರಾಮ ತೆಗೆದುಕೊಂಡು 2 ರಿಂದ ರೋಸ್ಟರ್‌ನಲ್ಲಿನ ಪ್ರಕರಣಗಳು ಪೂರ್ಣಗೊಳ್ಳುವವರೆಗೆ ಕೆಲಸವನ್ನು ಪುನರಾರಂಭಿಸುತ್ತಾರೆ.ಬಾಕಿ ಇರುವ ಪ್ರಕರಣಗಳನ್ನು ಮುಗಿಸಲು ನ್ಯಾಯಾಲಯವು ಆಗಾಗ್ಗೆ ಸಂಜೆಯವರೆಗೂ ಕುಳಿತುಕೊಳ್ಳುತ್ತದೆ.

LEAVE A REPLY

Please enter your comment!
Please enter your name here