ಅತ್ಯಾಚಾರ ಆರೋಪಿ ಬಿಷಪ್‌ರನ್ನು ಮತ್ತೆ ಚರ್ಚ್ ಗೆ ನಿಯುಕ್ತಿಗೊಳಿಸುವುದಾದರೆ, ಯೇಸು ಬೋಧನೆ ನಿಲ್ಲಿಸುವುದು ಉತ್ತಮ: ಸಿಸ್ಟರ್ ಲೂಸಿ ಕಲಪ್ಪುರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೇರಳದಲ್ಲಿ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ಚರ್ಚಿನ ಕರ್ತವ್ಯಕ್ಕೆ ಮರಳುವ ಸಾಧ್ಯತೆಯ ಕುರಿತಾದ ವರದಿಗಳಿಗೆ ಸಂತ್ರಸ್ತೆಯ ಬೆಂಬಲಿಗ ಸನ್ಯಾಸಿನಿಯರು ಹಾಗೂ ಫಾ.ಅಗಸ್ಟಿನ್ ವಟ್ಟೋಲಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬದುಕುಳಿದವರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ನಡೆಸಲಾದ ಅಭಿಯಾನದ ನೇತೃತ್ವವನ್ನು ಸೇವ್ ಅವರ್ ಸಿಸ್ಟರ್ಸ್ (ಎಸ್‌ಒಎಸ್) ವೇದಿಕೆಯ ಸಂಚಾಲಕ ಫಾ.ಅಗಸ್ಟಿನ್ ವಟ್ಟೋಲಿ ವಹಿಸಿದ್ದರು. ಜಲಂಧರ್ ಬಿಷಪ್ ‌ಮುಲಕ್ಕಲ್ ಅವರನ್ನು ಈ ವರ್ಷದ ಜನವರಿಯಲ್ಲಿ ಕೇರಳದ ಕೆಳ ನ್ಯಾಯಾಲಯವು ಅತ್ಯಾಚಾರ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಕೊಟ್ಟಾಯಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಕ್ರೈಸ್ತರ ಸರ್ವೊಚ್ಚ ಧಾರ್ಮಿಕ ಕೇಂದ್ರವಾದ ವ್ಯಾಟಿಕನ್ ಅಂಗೀಕರಿಸಿದೆ ಮತ್ತು ಮುಲಕ್ಕಲ್ ಅವರನ್ನು ಚರ್ಚಿನ ಕರ್ತವ್ಯಗಳಿಗೆ ಮರಳಲು ಅವಕಾಶ ನೀಡಲು ಆಲೋಚಿಸಿದೆ ಎಂದು ವರದಿಗಳು ಹೇಳುತ್ತವೆ.
ಮುಲಕ್ಕಲ್ ವಿರುದ್ಧ ಮಾತನಾಡಿದ್ದಕ್ಕಾಗಿ ಕ್ಯಾಥೋಲಿಕ್ ಚರ್ಚ್‌ನಿಂದ ಹೊರಹಾಕಲ್ಪಟ್ಟ ಸನ್ಯಾಸಿನಿ ಲೂಸಿ ಕಲಪ್ಪುರ, ಈ ನಿರ್ಧಾರವು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು. “ನನಗೆ ಮೊದಲು ದುಃಖ ಮತ್ತು ನಿರಾಶೆಯಾಯಿತು. ನಂತರ ಇದು ಚರ್ಚ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. “ಬಿಷಪ್ ಫ್ರಾಂಕೋ ಮುಲಕ್ಕಲ್ ರನ್ನು ಮರಳಿ ನಿಯುಕ್ತಿಗೊಳಿಸುವುದು ವ್ಯಾಟಿಕನ್ ನಿಲುವಾಗಿದ್ದರೆ, ದೇಶದ ಚರ್ಚ್‌ ಗಳಲ್ಲಿ ಚರ್ಚ್ ಹತ್ತು ಅನುಶಾಸನಗಳನ್ನು ಮತ್ತು ಯೇಸುಕ್ರಿಸ್ತನ ಬೋಧನೆಗಳ ಕುರಿತು ಉಪನ್ಯಾಸವನ್ನು ನಿಲ್ಲಿಸಬೇಕು” ಎಂದು ಅವರು ಆಗ್ರಹಿಸಿದರು. ಭಾರತದಲ್ಲಿ ನಿರ್ಧಾರಗಳನ್ನು ಹೆಚ್ಚಾಗಿ ಭಾರತದಲ್ಲಿ ಬಿಷಪ್‌ಗಳು ತೆಗೆದುಕೊಳ್ಳುತ್ತಾರೆ ಮತ್ತು ವ್ಯಾಟಿಕನ್‌ಗೆ ಯಾವುದೇ ಪಾತ್ರವಿಲ್ಲ, ಅದರ ಕೆಲಸವೇನೆಂದರೆ  ಕೇಲವ ಸಹಿ ಹಾಕುವುದು ಮಾತ್ರ ಎಂದು ಹೇಳಿದ್ದಾರೆ.
ವ್ಯಾಟಿಕನ್ ಫ್ರಾಂಕೋ ಮುಲಕ್ಕಲ್ ಅವರನ್ನು ಜಲಂಧರ್ ಬಿಷಪ್ ಆಗಿ ಮರುಸ್ಥಾಪಿಸಿದರೆ, ಅತ್ಯಾಚಾರವ ಆರೋಪ ಮಾಡಿದ್ದ ಸಂತ್ರಸ್ತೆ ಮತ್ತು ಇತರ ಸನ್ಯಾಸಿನಿಯರು ಉಳಿದುಕೊಂಡಿರುವ ಕಾನ್ವೆಂಟ್ ನೇರವಾಗಿ ಅವರ ಅಧೀನಕ್ಕೆ ಬರುತ್ತದೆ ” ಎಂದು ಫಾದರ್ ವಟ್ಟೋಲಿ ಹೇಳಿದ್ದಾರೆ. ‘ಅನ್ಯಾಯದ ವಿರುದ್ಧ ನಿಂತಿರುವ ಪ್ರತಿಯೊಬ್ಬರನ್ನು ಮೌನಗೊಳಿಸಲು’ ಈ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ವಟ್ಟೋಲಿ ಆರೋಪಿಸಿದರು.
“ನಮ್ಮ ಹೋರಾಟ ಕೊನೆಗೊಂಡಿಲ್ಲ. ಸಂತ್ರಸ್ತೆ ಈಗಾಗಲೇ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆಕೆ ಉನ್ನತ ನ್ಯಾಯಾಲಯಕ್ಕೆ ಹೋಗಬಹುದು. ಆದರೆ ಕೋರ್ಟ್ ಫ್ರಾಂಕೋ ಮುಳಕ್ಕಲ್ ನಿರಪರಾಧಿ ಎಂದು ತೀರ್ಪು ಹೇಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಕಾನೂನು ಆರೋಪಿಗಳಿಗೆ ಅನುಮಾನದ ಲಾಭವನ್ನು ನೀಡುತ್ತದೆ. ಇಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ‌ ಮಾತ್ರವೇ ಅವರನ್ನು ಖುಲಾಸೆಗೊಳಿಸಲಾಗಿದೆ, ಅವರು ನಿರಪರಾಧಿ ಎಂಬ ಕಾರಣಕ್ಕಾಗಿ ಅಲ್ಲ,” ಎಂದು ಫಾದರ್ ವಟ್ಟೋಲಿ ಹೇಳಿದ್ದಾರೆ.
ಅತ್ಯಾಚಾರ ಪ್ರಕರನದ ಸಂತ್ರಸ್ತೆ ಮತ್ತು ಅವಳನ್ನು ಬೆಂಬಲಿಸುವ ಐವರು ಸನ್ಯಾಸಿನಿಯರು ಜಲಂಧರ್ ಡಯಾಸಿಸ್ ಅಡಿಯಲ್ಲಿ ಬರುವ ಕುರವಿಲಂಗಾಡುವಿನ ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮ್‌ನಲ್ಲಿ ತಂಗಿದ್ದಾರೆ. ವಿಟ್ನೆಸ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ ಅವರಿಗೆ ಪೊಲೀಸ್ ರಕ್ಷಣೆ ಇದೆಯಾದರೂ, ಸನ್ಯಾಸಿನಿಯರು ಚರ್ಚ್‌ನಿಂದ ಒತ್ತಡವನ್ನು ಎದುರಿಸುತ್ತಲೇ ಇದ್ದಾರೆ. ಅವರನ್ನು ದೇಶದ ವಿವಿಧ ಕಾನ್ವೆಂಟ್‌ಗಳಿಗೆ ವರ್ಗಾಯಿಸುವ ಪ್ರಯತ್ನಗಳನ್ನು ಅವರು ವಿರೋಧಿಸಿದ್ದಾರೆ. ಪ್ರಕರಣದಲ್ಲಿ ಬದುಕುಳಿದವರ ಮನವಿಯನ್ನು ಹೈಕೋರ್ಟ್ ಸ್ವೀಕರಿಸಿದೆ, ಆದರೆ ವಿಚಾರಣೆಯ ದಿನಾಂಕದ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಲಾಗಿಲ್ಲ.
ಬದುಕುಳಿದವರ ಮತ್ತು ಇತರ ಸನ್ಯಾಸಿನಿಯರ ಪರಿಸ್ಥಿತಿಯ ಬಗ್ಗೆ ಕೇಳಿದಾಗ, ಅವರು ಹೊಸ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!