‘ಈ ಬಾರಿ ಪಾಕ್ ವಿಶ್ವಕಪ್ ಗೆದ್ದರೆ ‌ಬಾಬರ್ ಅಜಂ 2048ರಲ್ಲಿ ಪ್ರಧಾನಿಯಾಗ್ತಾರೆ..! ಇದು ಗವಾಸ್ಕರ್‌ ತರ್ಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅನೇಕ ಅಚ್ಚರಿಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾಗಿದ್ದು ಪಾಕ್‌ ಫೈನಲ್‌ ಗೆ ತಲುಪಿದ್ದಾಗಿದೆ. ಸೆಮಿ ಫೈನಲ್​ನಲ್ಲಿ ಪಾಕ್ ನ್ಯೂಜಿಲೆಂಡ್ ಅನ್ನು ಸೋಲಿಸಿದರೆ, ಇಂಗ್ಲೆಂಡ್ ಭಾರತವನ್ನು ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದಿದೆ. ಇಂದು ಆಸಿಸ್‌ ನೆಲದಲ್ಲಿ ಪಾಕ್‌ ಗೆ ಎರಡನೇ ಫೈನಲ್‌ ಆಗಲಿದೆ. ಇದಕ್ಕೂ ಮುನ್ನ 1992 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಅನ್ನು ಪಾಕ್‌ ಗೆದ್ದುಕೊಂಡಿತ್ತು. ಕಾಕತಾಳಿಯವೆಂದರೆ ಈ ಬಾರಿಯ ವಿಶ್ವಕಪ್‌ ಕೂಡಾ 1992 ರ ವಿಶ್ವಕಪ್‌ ಗೆ ಸಾಮ್ಯತೆಯೊಂದಿಗೆ ಸಾಗುತ್ತಿದೆ.
1992 ರ ಏಕದಿನ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತದ ಎದುರು ಸೋಲುಂಡಿತ್ತು. ಆ ಬಾರಿಯಂತೆ ಈ ಸಲವೂ ಆತಿಥೇಯ ಆಸ್ಟ್ರೇಲಿಯಾ ಗುಂಪು ಹಂತದಲೇ ನಿರ್ಗಮಿಸಿದೆ. ಅಲ್ಲದೆ ಆಗ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು. ಆ ಪಂದ್ಯ ಗೆದ್ದ ಪಾಕ್‌ ಫೈನಲ್‌ ಗೇರಿತ್ತು .ಅಲ್ಲದೆ ಫೈನಲ್​ನಲ್ಲಿ ಪಾಕಿಸ್ತಾನ – ಇಂಗ್ಲೆಂಡ್ ಗಳೇ ಮುಖಾಮುಖಿ ಆಗಿದ್ದು ಈ ಪಂದ್ಯದಲ್ಲಿ ಗೆದ್ದ‌ ಇಮ್ರಾನ್‌ ಖಾನ್‌ ನೇತೃತ್ವದ ಪಾಕ್‌ ತಂಡ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ವಿಶ್ವಕಪ್ ಬಹುತೇಕ ಘಟನೆಗಳು ಅಂದಿನ ಘಟನೆಗೆ ಸಾದೃಶವಾಗಿ ಸಾಗಿದೆ. ಆದ್ದರಿಂದ 30 ವರ್ಷಗಳ ಬಳಿಕವೂ ಅದೇ ಸಂಗತಿ ಪುನರಾವರ್ತನೆ ಆಗಲಿದೆ ಎಂದು ಪಾಕ್ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು ಎರಡೂ ವಿಶ್ವಕಪ್‌ಗಳ ನಡುವೆ ಹೋಲಿಕೆ ಮಾಡುತ್ತಿದ್ದಾರೆ. ಮತ್ತು ಬಾಬರ್ ಸೇನೆ ಟ್ರೋಫಿ ಗೆಲುತ್ತದೆ ಎಂದು ಬಲವಾಗಿ ನಂಬಿದ್ದಾರೆ.
ಈ ಸಂಗತಿಯನ್ನು ಗಮನಿಸಿರುವ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡುವ ಮೂಲಕ ಕ್ರಿಕೆಟ್‌ ಜಗತ್ತನ್ನು ಬೆರಗಾಗಿಸಿದ್ದಾರೆ. ʼಈ ವರ್ಷ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದರೆ, ಬಾಬರ್ ಭವಿಷ್ಯದಲ್ಲಿ ಇಮ್ರಾನ್ ಖಾನ್ ಅವರಂತೆ ದೇಶದ ಪ್ರಧಾನಿಯಾಗುತ್ತಾರೆ. “ಪಾಕಿಸ್ತಾನ ವಿಶ್ವಕಪ್ ಗೆದ್ದರೆ, 2048 ರಲ್ಲಿ ಬಾಬರ್ ಅಜಮ್ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ” ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ ಸಂವಾದದಲ್ಲಿ ಭವಿಷ್ಯ ನುಡಿದಿದ್ದಾರೆ.

1992 ರ ವಿಶ್ವಕಪ್‌ ನಾಯಕ ಇಮ್ರಾನ್‌ ಖಾನ್ 2018 ರಲ್ಲಿ ಪಾಕಿಸ್ತಾನದ 22 ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಅದೇ ಲೆಕ್ಕಾಚಾರದಲ್ಲಿ ಬಾಬರ್‌ 2048 ರಲ್ಲಿ ಪಾಕ್‌ ಪ್ರಧಾನಿಯಾಗಲಿದ್ದಾರೆ ಎಂಬುದು ಗವಾಸ್ಕರ್‌ ಮಾತಿನ ಒಳಾರ್ಥವಾಗಿದೆ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!