ರಾಜ್ಯದಲ್ಲಿ ಪಿಎಫ್‌ಐ ಬ್ಯಾನ್ ಮುಂದುವರೆಯಬೇಕೆಂದರೆ ಬಿಜೆಪಿ ಆಡಳಿತದಲ್ಲಿರಬೇಕು: ಜೆ.ಪಿ.ನಡ್ಡಾ

ಹೊಸದಿಗಂತ ವರದಿ,ಹಾವೇರಿ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದು ಶಾಂತ ವಾತಾವರಣ ಇರಬೇಕೆಂದರೆ ಆಡಳಿತ ಬಿಜೆಪಿಯದ್ದಾಗಿರಬೇಕು. ಬಿಜೆಪಿ ಸರ್ಕಾರ ಪಿಎಫ್‌ಐ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ ಪಿಎಫ್‌ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಪಿಎಫ್‌ಐ ಬ್ಯಾನ್ ಮುಂದುವರೆಯಬೇಕು ಅಂದರೆ ಕಮಲದ ಗುರುತಿಗೆ ಮತ ನೀಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚುನಾವಣಾ ಉಮೇದುವಾರಿಕೆಗೂ ಪೂರ್ವದಲ್ಲಿ ಜಿಲ್ಲೆಯ ಶಿಗ್ಗಾವ ಪಟ್ಟಣದಲ್ಲಿ ಬುಧವಾರ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಬೊಮ್ಮಾಯಿ ಸರ್ಕಾರದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್‌ಗಳು ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ವಿಕಾಸಕ್ಕಾಗಿ ಕಮಲಕ್ಕೆ ಮತ ಹಾಕಬೇಕು. ಬೊಮ್ಮಾಯಿ ಅವರನ್ನು ನೀವು ಈಗಾಗಲೆ ಗೆಲ್ಲಿಸಿದ್ದೀರಿ. ರಾಜ್ಯದಲ್ಲಿ ಕಮಲವನ್ನು ಅರಳಿಸಲು ಮನೆಮನೆಗೆ ತೆರಳಿ ಪ್ರಚಾರ ಮಾಡಿ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ಅವರು ರಾಜ್ಯಕ್ಕೆ ಕಳಿಸಿದ ಅನುದಾನವನ್ನು ಡೆಲ್ಲಿ ಕಾಂಗ್ರೆಸ್‌ಗೆ ಕಳಿಸುತ್ತಾರೆ. ಇಂತಹ ಸರ್ಕಾರ ನಿಮಗೆ ಬೇಕಾ? ಮೋದಿ ಕಳಿಸೋ ಅನುದಾನ ರಾಜ್ಯದ ಅಭಿವೃದ್ಧಿಗೆ ಸದ್ಬಳಕೆ ಆಗಬೇಕು. ಕಾಂಗ್ರೆಸ್ ಅಂದ್ರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್. ಕಾಂಗ್ರೆಸ್ ನಾಯಕರು ನಾಯಕರಲ್ಲ. ಅವರು ಎಟಿಎಂ ಮಷಿನ್ ನಡೆಸೋ ಜನರು. ಎಟಿಎಂ ಅಂದರೆ ಆಟೋಮ್ಯಾಟಿಕ್ ಟ್ರಾನ್ಸಫರ್ ಆಫ್ ಮನಿ. ಇದು ಡೆಲ್ಲಿ ಕಾಂಗ್ರೆಸ್ಸಿಗರಿಗೆ ಅನುಕೂಲ. ಇದು ತಪ್ಪಿಸುವುದಕ್ಕಾಗಿ ನೀವು ಬಿಜೆಪಿಗೆ ಮತ ಹಾಕಿ ಎಂದರು.
ರಾಜ್ಯದಲ್ಲಿ ಹೈವೇಗಳು ನಿರ್ಮಾಣ ಆಗ್ತಿದೆ. ತುಮಕೂರಿನಲ್ಲಿ ಹೆಲಿಕ್ಯಾಪ್ಟರ್, ವಿಮಾನುಗಳ ನಿರ್ಮಾಣ ಆಗ್ತಿದೆ. ರಾಜ್ಯದಲ್ಲಿ ವಂದೇ ಭಾರತ ರೈಲು ಓಡಾಡುತ್ತಿದೆ. ರೈಲುಗಳು ಇನ್ನೂ ಹೆಚ್ಚು ಓಡಾಡಬೇಕು ಅಂದರೆ ಬಿಜೆಪಿಗೆ ಮತ ನೀಡಿ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಮನೆ, ಅಕ್ಕಿ, ಗೋದಿ ಪಡೆಯಲು ಕಮಲದ ಗುರುತಿಗೆ ಮತ ಹಾಕಿ ಎಂದು ವಿನಿಂತಿಸಿದರು.
ಆಯುಷ್ಮಾನ ಭಾರತ ಯೋಜನೆಯಿಂದ ಬಡವರಿಗೆ ಅನಕೂಲ ಆಗುತ್ತಿದೆ. ಈ ಯೋಜನೆ ಮುಂದುವರೆಯಲು ಬಿಜೆಪಿ ಗುರುತಿಗೆ ಬಟನ್ ಒತ್ತಿ. ಎಫ್ ಡಿ ಐ ಮೂಲಕ ಕರ್ನಾಟಕಕ್ಕೆ ಅತಿ ಹೆಚ್ಚು ಬಂಡವಾಳ ಬರುತ್ತಿದೆ. ಇದು ಇನ್ನೂ ಹೆಚ್ಚಾಗಲು ಬೊಮ್ಮಾಯಿ ಕೈ ಬಲಪಡಿಸಲು ಬಿಜೆಪಿಗೆ ಮತ ಹಾಕಿ ಎಂದು ಹೇಳಿದರು.
ಸುದೀಪ್ ಅವರು ಮಾತನಾಡುವ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮೆಚ್ಚಿರುವುದಾಗಿ ಹೇಳಿದರು. ಅಲ್ಲದೇ ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ ಇನ್ನಷ್ಟು ಸಮಯ ಬೇಕಿದೆ ಎಂದೂ ಬಯಕೆ ವ್ಯಕ್ತಪಡಿಸಿದರು. ನಾನು ಕೇವಲ ಬೊಮ್ಮಾಯಿ ಪರವಾಗಿ ಮತಕೇಳಲು ಬಂದಿಲ್ಲ. ಕರ್ನಾಟಕದಲ್ಲಿ ವಿಕಾಸದ ಗಂಗಾ ಹರಿಸಲು ಕಮಲಕ್ಕೆ ನಿಮ್ಮ ಮತ ಕೇಳಲು ಬಂದಿದ್ದೇನೆ ಎಂದು ನಡ್ಡಾ ಹೇಳಿದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ, ಚಿತ್ರ ನಟ ಸುದೀಪ್, ಶಿವಾನಂದ ಮ್ಯಾಗೇರಿ, ರೂಪಾ ಬನ್ನಿಕೊಪ್ಪ, ವಿರೇಶ ಆಜೂರ, ನರಹರಿ ಕಟ್ಟಿ, ಶ್ರೀಕಾಂತ ಬುಳಕ್ಕನವರ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!